ಹುಬ್ಬಳ್ಳಿ: ಬಿಸಿಲಿನ ತಾಪ ಜನರನ್ನು ಮಾತ್ರವಲ್ಲ ಪ್ರಾಣಿ-ಪಕ್ಷಿಗಳನ್ನೂ ಹೈರಾಣಾಗಿಸುತ್ತಿದೆ. ಪ್ರಾಣಿ, ಪಕ್ಷಿಗಳೂ ಗುಟುಕು ನೀರಿಗಾಗಿ ಪರಿತಪಿಸುತ್ತಿವೆ. ಮೂಕಪ್ರಾಣಿಗಳ ಕುಡಿಯುವ ನೀರಿನ ಬವಣೆ ಪರಿಹರಿಸಲು ಇಲ್ಲೊಬ್ಬ ರೈತ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ.
ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೊಸಳಿಕಟ್ಟಿ ಗ್ರಾಮದ ರೈತ ಗೋವಿಂದ ಗುಂಡಪ್ಪ ಗುಂಡಕಲ್ಲ ಎಂಬವರು ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವ ಸದುದ್ದೇಶದಿಂದ ತಮ್ಮ ಹೊಲದ ಬೋರ್ವೆಲ್ನಿಂದ ತಟ್ಟಿಹಳ್ಳಕ್ಕೆ ನೀರು ಬಿಡುತ್ತಿದ್ದಾರೆ.
"ಪ್ರಾಣಿ, ಪಕ್ಷಿಗಳು ಹಳ್ಳಕ್ಕೆ ಬಂದು ನೀರಿಲ್ಲದೆ ಹೋಗುವುದನ್ನು ಕಂಡು ಜೀವ ಹಿಂಡಿದಂತಾಗುತ್ತಿತ್ತು. ಹೀಗಾಗಿ ಬೋರ್‌ವೆಲ್ ನೀರನ್ನು ಹಳ್ಳಕ್ಕೆ ಬಿಡುವ ಕೆಲಸ ಮಾಡುತ್ತಿದ್ದೇನೆ. ಸಾಕಷ್ಟು ಪ್ರಾಣಿ ಪಕ್ಷಿಗಳು ದಾಹ ತೀರಿಸಿಕೊಳ್ಳುತ್ತಿವೆ. ಇದರಿಂದ ನನಗೆ ಸಂತೋಷವಾಗಿದೆ. ನಾನು ಸ್ವಪ್ರೇರಣೆಯಿಂದ ಈ ಕಾರ್ಯ ಮಾಡುತ್ತಿದ್ದೇನೆ" ಎಂದು ಗೋವಿಂದ ಹೇಳಿದ್ದಾರೆ.
ರೈತ ಮುಖಂಡ ಪರಶುರಾಮ್ ಎಂಬವರು ಈ ಕುರಿತು ಪ್ರತಿಕ್ರಿಯಿಸಿ, "ಪ್ರಾಣಿಗಳಿಗೆ ಗೋವಿಂದಪ್ಪ ನೀರು ಕುಡಿಸುವ ಮೂಲಕ ಭಗೀರಥರಾಗಿದ್ದಾರೆ. ಅವರ ಕಾರ್ಯಕ್ಕೆ ರೈತ ಸಂಘ ಅಭಿನಂದನೆ ಸಲ್ಲಿಸುತ್ತದೆ" ಎಂದರು.
ಇದನ್ನೂ ಓದಿ: ಜಮೀನಿನಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ವಾಟರ್ಮ್ಯಾನ್ ಪ್ರಕಾಶ್ ಬಾರ್ಕಿ - WATERMAN PRAKASH BARKI