ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಕುಟುಂಬಸ್ಥರು ನಿನ್ನೆ (ಮಂಗಳವಾರ) ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಜೈಲಿಗೆ ಬಂದ ಪವಿತ್ರ ತಂದೆ, ತಾಯಿ ಹಾಗೂ ಕಿರಿಯ ಸಹೋದರ ಕೆಲಹೊತ್ತು ಮಾತುಕತೆ ನಡೆಸಿದ ನಂತರ ವಾಪಸ್ ತೆರಳಿದರು.
ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಿ ಬಂದಾಗ ಆಕೆ ಕಿರಿಯ ಸಹೋದರ ಅವಾಜ್ ಹಾಕಿದ್ದನು. ಈ ಬಾರಿ ಪವಿತ್ರಾಳನ್ನು ಭೇಟಿ ಮಾಡಲು ಫುಲ್ ಸೈಲೆಂಟ್ ಆಗಿ ಜೈಲಿನ ಒಳಗೆ ಹೋದರು.
ಜೈಲಿನಲ್ಲಿರುವ ಪವಿತ್ರಾ ಗೌಡ ತುಂಬಾ ಆತಂಕಗೊಂಡಿದ್ದಾರೆ. ಯಾರೂ ಕೂಡ ತಮ್ಮನ್ನ ಮಾತನಾಡಿಸಲು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಪೋಷಕರಿಗೆ ಕರೆ ಮಾಡಿ ಬೈದಾಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಕಳೆದ ಸೋಮವಾರವಷ್ಟೇ ಪವಿತ್ರಾ ಗೌಡ ಅವರ ಸಹೋದರ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದರು. ಭೇಟಿ ವೇಳೆಯಲ್ಲಿ ಒಂದು ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿ ನೀಡಿದ್ದರು. ಅದರಲ್ಲಿ ಬಟ್ಟೆ ಹಾಗೂ ಮೇಕಪ್ ಕಿಟ್ ಇತ್ತು ಎನ್ನಲಾಗಿದೆ. ನಿನ್ನೆ (ಮಂಗಳವಾರ) ಅವರ ತಂದೆ, ತಾಯಿ ಹಾಗೂ ಕಿರಿಯ ಸಹೋದರ ಕೂಡ ಜೈಲಿಗೆ ತೆರಳಿ ಪವಿತ್ರಾಳನ್ನು ಭೇಟಿ ಮಾಡಿದ್ದಾರೆ.
ಏನಿದು ರೇಣುಕಾಸ್ವಾಮಿ ಕೊಲೆ ಪ್ರಕರಣ?: ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಅಶ್ಲೀಲವಾಗಿ ಸಂದೇಶ ಕಳಿಸಿದ್ದ ಎನ್ನಲಾಗಿದೆ. ಆ ಕಾರಣದಿಂದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್ನಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ಆರೋಪ ದರ್ಶನ್, ಪವಿತ್ರಾ ಗೌಡ ಮತ್ತು ಸಹಚರರ ಮೇಲಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಈ ಕೊಲೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆಯೇ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ.