ಬೆಂಗಳೂರು: ನಕಲಿ ನೋಟು ಚಲಾವಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಪರಾಧಿಗೆ ಆರು ವರ್ಷಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ಎನ್ಐಎ ನ್ಯಾಯಾಲಯ ತೀರ್ಪು ನೀಡಿದೆ. ಪಶ್ಚಿಮ ಬಂಗಾಳ ಮೂಲದ ಸರಿಫುಲ್ ಇಸ್ಲಾಂ ಶಿಕ್ಷೆಗೊಳಗಾದ ಅಪರಾಧಿ.
ಪಶ್ಚಿಮ ಬಂಗಾಳ ಮೂಲದ ಈತ 2018ರಲ್ಲಿ ನಕಲಿ ನೋಟು ಚಲಾವಣೆ ಮಾಡಿ ದೇಶದ ಆರ್ಥಿಕತೆ ಪೆಟ್ಟು ಕೊಡಲು ಮುಂದಾಗಿದ್ದ. ಆರೋಪಿಯನ್ನ ಚಿಕ್ಕೋಡಿ ಠಾಣೆ ಪೊಲೀಸರು ಬಂಧಿಸಿದ್ದರು. ಅಲ್ಲದೆ, ಪ್ರಕರಣದಲ್ಲಿ ಇತರೆ ಆರು ಮಂದಿಗೆ ಈಗಾಗಲೇ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಬಾಂಗ್ಲಾದೇಶದ ಗಡಿಯಿಂದ ದೇಶದ ವಿವಿಧ ಭಾಗಗಳಿಗೆ 82 ಸಾವಿರ ಮುಖಬೆಲೆಯ 41 ನಕಲಿ ಭಾರತೀಯ ನೋಟುಗಳನ್ನು ಕಳ್ಳಸಾಗಣೆ ಮಾಡಲು ಆರೋಪಿಗಳು ಇತರ 6 ಜನರೊಂದಿಗೆ ಪಿತೂರಿ ನಡೆಸಿರುವುದನ್ನ ಎನ್ಐಎ ತನಿಖೆಯಿಂದ ತಿಳಿದುಬಂದಿತ್ತು. ಸರಿಫುಲ್ ಇಸ್ಲಾಂ ಪಶ್ಚಿಮ ಬಂಗಾಳದಿಂದ ನಕಲಿ ನೋಟುಗಳನ್ನು ಸಂಗ್ರಹಿಸಲು ಮತ್ತು ದೇಶಾದ್ಯಂತ ಅದರ ಚಲಾವಣೆಗಾಗಿ ತನ್ನ ಸಹ ಆರೋಪಿಗಳೊಂದಿಗೆ ಸಂವಹನ ನಡೆಸಲು ಮೋಸದಿಂದ ಸಿಮ್ ಕಾರ್ಡ್ ಪಡೆದಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು.
ಅಪರಾಧಿಯು ಹಲವು ನಕಲಿ ನೋಟು ವ್ಯವಹಾರಗಳಲ್ಲಿ ತೊಡಗಿರುವುದು ದೃಢಪಟ್ಟಿದೆ. ಜೊತೆಗೆ ಪ್ರಶ್ಚಿಮ ಬಂಗಾಳದಲ್ಲಿ ಪ್ರಕರಣ ಪ್ರಮುಖ ಆರೋಪಿ ದಲಿಮ್ ಮಿಯಾಗೆ ಈತ 10.30 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಭಾರತದ ಆರ್ಥಿಕತೆಗೆ ಪೆಟ್ಟು ನೀಡಿ ಅವ್ಯವಸ್ಥೆ ಉಂಟು ಮಾಡಲು ಇವರು ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಅಪರಾಧಿಗಳಿಗೆ ನಕಲಿ ನೋಟು ಪೂರೈಸಿದ ಬಾಂಗ್ಲಾದೇಶದ ಇಬ್ಬರು ಪ್ರಜೆಗಳ ವಿರುದ್ಧವೂ ಎನ್ಐಎ ತನಿಖೆ ಮುಂದುವರಿಸಿದೆ. ಈ ಪ್ರಕರಣ ಸಂಬಂಧ ಎನ್ಐಎ ಮೂರು ಚಾರ್ಜ್ಶೀಟ್ ಸಲ್ಲಿಸಿತ್ತು. ಸದ್ಯ ಈ ಅಪರಾಧಿಗೆ ಆರು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.