ರಾಯಚೂರು: ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ವಿರುದ್ಧ ಜಾತಿ ಪ್ರಮಾಣಪತ್ರ ಕುರಿತು ವಿವಾದ ಸೃಷ್ಟಿಯಾಗಿದ್ದು, ಜಾತಿಪ್ರಮಾಣ ಪತ್ರ ವಾಪಸ್ ಪಡೆಯುವಂತೆ ಮಾನವಿ ತಾಲೂಕು ನಾಯಕ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
"ರಾಜಾ ಅಮರೇಶ್ವರ ನಾಯಕ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ, ಬದಲಾಗಿ ಕ್ಷತ್ರಿಯರು, ವಾಲ್ಮಿಕಿ ಕ್ಷತ್ರಿಯ ಜಾತಿಗೆ ಸೇರಿದವರು. ಪ್ರಾಥಮಿಕ ಶಾಲಾ ಹಂತದಿಂದ ಪ್ರಮಾಣ ಪತ್ರಗಳಲ್ಲಿ ಜಾತಿ ಬದಲಾಗುತ್ತ ಬಂದಿದೆ. ವಾಲ್ಮೀಕಿ ಕ್ಷತ್ರಿಯ ಜಾತಿ ಪರಿಶಿಷ್ಟ ಪಂಗಡಕ್ಕೆ ಒಳಪಡುವುದಿಲ್ಲ. ಪ್ರಾಥಮಿಕ ಶಾಲಾ ದಾಖಲಾತಿಯಲ್ಲಿ ಜಾತಿ ಉಪಜಾತಿ ಕಾಲಂ ನಲ್ಲಿ ಹಿಂದೂ ಕ್ಷತ್ರಿಯ, ಪ್ರೌಢಶಾಲಾ ದಾಖಲಾತಿಯಲ್ಲಿ ವಾಲ್ಮಿಕಿ ಕ್ಷತ್ರಿಯ ಎಂದು ಬದಲಾಗಿದೆ. ಪರಿಶಿಷ್ಟ ಪಂಗಡ ಎಂದು ಸುಳ್ಳು ದಾಖಲೆ ಪತ್ರ ಪಡೆದಿದ್ದಾರೆ" ಎಂದು ಮಾನವಿ ತಾಲೂಕು ನಾಯಕ ಸಮಾಜದ ಮುಖಂಡರಾದ ನರಸಿಂಹ ನಾಯಕ, ಶರಣಬಸವ ನಾಯಕ ಸೇರಿದಂತೆ ಇನ್ನೂ ಕೆಲ ಮುಂಖಡರು ಆರೋಪಿಸಿದ್ದಾರೆ.
ಅಲ್ಲದೇ, ಎಸ್ಟಿ ಜಾತಿ ಪ್ರಮಾಣಪತ್ರ ಹಿಂಪಡೆಯುವಂತೆ ಲಿಂಗಸುಗೂರು ತಹಶಿಲ್ದಾರಗೆ ಮನವಿ ಮಾಡಿದ್ದು, ಬಿಜೆಪಿ ಅಭ್ಯರ್ಥಿಯನ್ನು ಬದಲಿಸುವಂತೆ ಒತ್ತಾಯಿಸಿದ್ದಾರೆ.
ಈ ಆರೋಪ ಕುರಿತು ರಾಜಾ ಅಮರೇಶ್ವರ ಪ್ರತಿಕ್ರಿಯಿಸಿ, "ಈಗಾಗಲೇ ಹಲವು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾನೆ. 1989ರಲ್ಲಿ ಮೊದಲೇ ಚುನಾವಣೆಗೆ ನಿಂತಿದ್ದು, ಕಳೆದ 35 ವರ್ಷಗಳಿಂದ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದೇನೆ ಎಂದೂ ಇರದ ಜಾತಿ ವಿಚಾರ ಕೇವಲ ಚುನಾವಣೆ ಸಂದರ್ಭದಲ್ಲಿ ಬರುತ್ತದೆ. ಈಗ ಬೇರೆ ಯಾವುದೇ ಆಪಾದನೆ ಮಾಡಲು ಏನು ಇಲ್ಲ. ಈ ಬಗ್ಗೆ ನ್ಯಾಯಾಂಗ ಹಾಗೂ ಕಾರ್ಯಾಂಗ ನಿರ್ದಿಷ್ಟವಾದ ನಿರ್ದೇಶನ ಕೊಟ್ಟಿದೆ. ನಮ್ಮ ಮನೆತನ ಇಂದು ಸಾವಿರಾರು ವರ್ಷಗಳ ಇತಿಹಾಸವಿರುವಂತಹ ಮನೆತನ. ವಾಲ್ಮೀಕಿ ಬುಡಕಟ್ಟು ಜನಾಂಗದ ಮುಖಂಡರಾಗಿ, ರಾಜರಾಗಿ ಕೆಲಸ ಮಾಡಿದ್ದೇವೆ. ಇತಿಹಾಸದಲ್ಲಿ ಉಲ್ಲೇಖವಾಗಿದೆ. ಸಮಾಜದಲ್ಲಿ ನಿಜವಾಗಿ ನಕಲಿ ಜಾತಿ ಪ್ರಮಾಣಪತ್ರ ತೆಗಿಸುವವರ ವಿರುದ್ಧ ಮಾತನಾಡದೇ, ದಾಖಲೆಗಳು ಎಲ್ಲಾ ಇದ್ದರೂ ಸಹ ನನ್ನ ವಿರುದ್ಧ ವೈಯಕ್ತಿಕವಾಗಿ ಸಮಾಜದ ಮುಂಖಡರ ಏಳಿಗೆ ಸಹಿಸದೆ ಇಂತಹ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರಳಿಲ್ಲ'' ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಹುದ್ದೆಯ ಬಯಕೆ ವ್ಯಕ್ತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ - Samyuktha Patil