ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸೋಲುಂಡಿದ್ದ ಯಾಸೀರ್ ಖಾನ್ ಪಠಾಣ್, ಉಪ ಸಮರದಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಲು ಸಜ್ಜಾಗಿದ್ದಾರೆ.
ಮೊದಲ 7 ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಮುನ್ನಡೆ ಸಾಧಿಸಿದ್ದರು. ನಂತರ ಸತತ 18 ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡು, ಭರತ್ ಬೊಮ್ಮಾಯಿ ಅವರನ್ನು 13,448 ಮತಗಳ ಅಂತರದಿಂದ ಸೋಲಿಸಿದರು. ಒಟ್ಟಾರೆ ಯಾಸೀರ್ ಖಾನ್ ಪಠಾಣ್ 1,00,756 ಮತ ಪಡೆದಿದ್ದು, ಭರತ್ ಬೊಮ್ಮಾಯಿ 87,308 ಮತ ಪಡೆದಿದ್ದಾರೆ.
ಯಾಸೀರ್ ಖಾನ್ ಪಠಾಣ್ ಗೆಲುವಿಗೆ ಕಾರಣಗಳೇನು?:
- ಸಚಿವ ಸತೀಶ್ ಜಾರಕಿಹೊಳಿ ಶಿಗ್ಗಾಂವಿಯಲ್ಲೇ ವಾಸ್ತವ್ಯ ಹೂಡಿ ತಮ್ಮದೇ ಚುನಾವಣೆ ಎಂಬಂತೆ ಅಹಿಂದ ಮತದಾರರ ಓಲೈಕೆ ಮಾಡಿದ್ದು.
- ಬಿಜೆಪಿ ನಂಬಿಕೊಂಡಿದ್ದ ಲಿಂಗಾಯತ ಮತದಾರಲ್ಲಿ ಸ್ವಲ್ಪ ಮತದಾರರು ಕೈ ಪರ ಮತ ಚಲಾಯಿಸಿದ್ದು.
- ಕಾಂಗ್ರೆಸ್ ಪಾಳಯ ಶಿಗ್ಗಾಂವಿಯಲ್ಲಿಯೇ ಬೀಡು ಬಿಟ್ಟು ಭರ್ಜರಿ ಕ್ಯಾಂಪೇನ್ ಮಾಡಿದ್ದು ಪಠಾಣ್ಗೆ ವರವಾಯಿತು.
- ಅಜ್ಜಂಪೀರ್ ಖಾದ್ರಿ ಮನವೊಲಿಸಿ ಚುನಾವಣೆ ಎದುರಿಸಿದ ಹಿನ್ನೆಲೆ ಪಠಾಣ್ ಗೆಲುವು ಸುಲಭವಾಯಿತು.
- ಬಿಜೆಪಿ ಪ್ರಸ್ತಾಪಿಸಿದ್ದ ವಕ್ಪ್ ವಿಚಾರಗಳು ಅವರಿಗೆ ಮತಗಳಾಗಿ ಮಾರ್ಪಡದಿರುವುದು.
- ಬಸವರಾಜ ಬೊಮ್ಮಾಯಿ ಮೊದಲ ಸಲ ಪ್ರಬಲವಾಗಿ ಪ್ರಯೋಗಿಸಿದ್ದ ಹಿಂದುತ್ವ ಅಸ್ತ್ರ ವಿಫಲವಾಯಿತು.
- ಪಂಚಮಸಾಲಿ ಮತದಾರರು ಕಾಂಗ್ರೆಸ್ ಕಡೆ ವಾಲಿದ್ದು.
- ಪ್ರತಿ ಸಲ ಬಸವರಾಜ ಬೊಮ್ಮಾಯಿ ಪಾಲಾಗ್ತಿದ್ದ ಶೇ 10ರಷ್ಟು ಮುಸ್ಲಿಂ ಮತಗಳೂ ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದ್ದು.
- ಕುರುಬ ಸಮುದಾಯದವರು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಿಂತಿರುವುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನನ್ನನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದ : ಯಾಸೀರ್ ಖಾನ್ ಪಠಾಣ್