ಬೆಂಗಳೂರು : ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಹೆಸರಿನಲ್ಲಿ ಮಹಿಳೆಯೊಬ್ಬರಿಂದ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಸಹಿತ ನಾಲ್ವರು ಸಂಚಾರ ಪೊಲೀಸ್ ಸಿಬ್ಬಂದಿಯರನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ. ಜೀವನ್ ಭೀಮಾ ನಗರ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ವೆಂಕಟಾಚಲಪತಿ, ಹೆಡ್ ಕಾನ್ಸ್ಟೇಬಲ್ಗಳಾದ ಗಿರೀಶ್, ಹುಚ್ಚು ಸಾಬ್ ಮತ್ತು ಕಾನ್ಸ್ ಟೇಬಲ್ ಬಸಪ್ಪ ಎಂಬುವರನ್ನ ಅಮಾನತುಗೊಳಿಸಲಾಗಿದೆ.
ನಡೆದಿದ್ದೇನು: ಕಳೆದ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ತಮ್ಮ ಮಗಳನ್ನ ಹಳೆ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿ ತಡೆದಿದ್ದ ಪೊಲೀಸರು, ತಪಾಸಣೆ ಮಾಡದೇ ಡ್ರಿಂಕ್ ಆ್ಯಂಡ್ ಡ್ರೈವ್ ಆರೋಪ ಮಾಡಿ ಮೊದಲಿಗೆ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಗೂಗಲ್ ಪೇ ನಂಬರ್ ಮೂಲಕ 5 ಸಾವಿರ ಹಾಕಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಣ ಪಡೆದ ಸಿಬ್ಬಂದಿ ಬಾಡಿ ಕ್ಯಾಮ್ ಕಣ್ತಪ್ಪಿಸಿ ಹಣ ಪಡೆದುಕೊಂಡಿದ್ದಾರೆ ಎಂದು ಆಕೆಯ ತಂದೆ ಎಕ್ಸ್ ಆ್ಯಪ್ನಲ್ಲಿ ಆರೋಪಿಸಿ ಹಿರಿಯ ಪೊಲೀಸ್ ಅಧಿಕಾರಿಗೆ ಟ್ಯಾಗ್ ಮಾಡಿದ್ದರು.
ಆರೋಪಕ್ಕೆ ಎಕ್ಸ್ ಆ್ಯಪ್ ಮೂಲಕ ಪ್ರತಿಕ್ರಿಯಿಸಿದ್ದ ಜೀವನ್ ಭೀಮಾ ನಗರ ಸಂಚಾರಿ ಠಾಣಾ ಪೊಲೀಸರು, ಹಣ ಪಡೆದುಕೊಳ್ಳಲಾಗಿದೆ ಎನ್ನಲಾಗಿರುವ ಗೂಗಲ್ ಪೇ ನಂಬರ್ ಹಂಚಿಕೊಳ್ಳುವಂತೆ ಕೋರಿದ್ದರು. ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ತನಿಖೆ ವೇಳೆ ಆರೋಪಿತ ಸಿಬ್ಬಂದಿಯರ ಲೋಪ ಕಂಡುಬಂದ ಹಿನ್ನೆಲೆ ಅಮಾನತುಗೊಳಿಸಿ ಆದೇಶಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಪೊಲೀಸ್ ಇಲಾಖೆಗೆ ಧನ್ಯವಾದಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಅನೇಕರು ಧನ್ಯವಾದ ತಿಳಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಓದಿ: 'ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಗೂಗಲ್ ಪೇ ಮೂಲಕ ಹಣ ಪಡೆದ ಪೊಲೀಸರು': ಗಂಭೀರ ಆರೋಪ