ಚಾಮರಾಜನಗರ: ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಪುರಾತತ್ವ ಶಾಸ್ತ್ರ ವಿಭಾಗವು ಮಿಥಿಕ್ ಸೊಸೈಟಿಯ ಧನಸಹಾಯ ಪಡೆದು ಇಂದಿನಿಂದ ಕಬ್ಬಿಣ ಯುಗದ ಸಮಾಧಿಗಳ ಉತ್ಖನನ ಆರಂಭಿಸಿದೆ.
ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಬ್ಬಿಣ ಯುಗದ ಸಮಾಧಿಗಳಿದ್ದು, ಇವು 2000ದಿಂದ 2500 ವರ್ಷಗಳದ್ದಾಗಿವೆ. ಸ್ಥಳೀಯವಾಗಿ ಇವುಗಳನ್ನು ಪಾಂಡವರ ಮನೆ ಎಂದು ಕರೆಯುತ್ತಿದ್ದು, ಬಂಡೆ ಕಲ್ಲುಗಳನ್ನು ಸುತ್ತಲೂ ಜೋಡಿಸಿ ಮಧ್ಯದಲ್ಲಿ ಕಲ್ಲಿನ ರಾಶಿಗಳನ್ನು ಗುಪ್ಪೆ ಥರ ಮಾಡಲಾಗಿದೆ. ಇದೀಗ ಈ ಸಮಾಧಿಗಳ ಉತ್ಖನನ ಕಾರ್ಯಾರಂಭಗೊಂಡಿದೆ.
ಮೈಸೂರು ವಿವಿಯ ಪ್ರಾಚೀನ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿ.ಶೋಭಾ ನೇತೃತ್ವದಲ್ಲಿ 20ಕ್ಕೂ ಅಧಿಕ ಸಂಶೋಧಕರು, ವಿದ್ಯಾರ್ಥಿಗಳು ಉತ್ಖನನ ಕಾರ್ಯದಲ್ಲಿ ತೊಡಗಿದ್ದಾರೆ.
ಡಾ.ವಿ.ಶೋಭಾ ಪ್ರತಿಕ್ರಿಯಿಸಿ, "1961ರಲ್ಲಿ ಭಾರತೀಯ ಪುರಾತತ್ತ್ವ ಇಲಾಖೆ ವತಿಯಿಂದ ಈ ಸಮಾಧಿಗಳನ್ನು ಕೃಷ್ಣಮೂರ್ತಿ ಎಂಬವರು ಗುರುತು ಮಾಡಿದ್ದರು. ಬಳಿಕ ಸಂಶೋಧನಾ ಕಾರ್ಯ ನಡೆದಿರಲಿಲ್ಲ. ಈಗ ಉತ್ಖನನ ಆರಂಭಿಸಿದ್ದು, ಕಬ್ಬಿಣ ಯುಗದ ಜನರ ನಂಬಿಕೆ ಏನಾಗಿತ್ತು, ಸಮಾಧಿಯಲ್ಲಿ ಅವರು ಯಾವ ವಸ್ತುಗಳನ್ನು ಇಡುತ್ತಿದ್ದರು, ಅವರ ದೃಷ್ಟಿಯಲ್ಲಿ ಸಮಾಧಿ ಅಂದರೆ ಏನಾಗಿತ್ತು, ಸಮಾಧಿ ಒಳಗಡೆ ಎಷ್ಟೆಲ್ಲ ವಸ್ತುಗಳನ್ನು ಇಡುತ್ತಿದ್ದರು ಎಂಬ ವಿಚಾರಗಳು ತಿಳಿಯುವ ನಿರೀಕ್ಷೆ ಇದೆ. ಪುರಾತತ್ವ ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ಖನನ ದೊಡ್ಡ ಜ್ಞಾನ ನೀಡಲಿದೆ" ಎಂದರು.
ಇದನ್ನೂ ಓದಿ: ವಿಜಯನಗರ ಕಾಲದ ಶಾಸನ ಪತ್ತೆ: ಆನೆಗೊಂದಿಯೇ ಕಿಷ್ಕಿಂಧಾ ಎಂಬುದಕ್ಕೆ ಐತಿಹಾಸಿಕ ದಾಖಲೆ ಲಭ್ಯ - Inscription Found