ಬೆಂಗಳೂರು: ರಾಹುಲ್ ಗಾಂಧಿಯವರು ಲೂಸ್ ಗನ್ ಇದ್ದಂತೆ. ಎಲ್ಲೆಂದರಲ್ಲಿ ಗುಂಡು ಹಾರಿಸುತ್ತಾರೆ. ಅವರ ಹೇಳಿಕೆಗಳೂ ಅಸಂಬದ್ಧ ಎಂದು ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಶಿವಲಿಂಗಯ್ಯ ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗ್ನಿವೀರರನ್ನು ಟಿಶ್ಯೂ ಪೇಪರ್ ಆಗಿ ಬಳಸುತ್ತಿದ್ದಾರೆ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಆದರೆ, ಎರಡನೇ ವಿಶ್ವಯುದ್ಧದ ಬಳಿಕ ನೆಹರೂ ಅವರು ಪ್ರಧಾನಿ ಆಗಿದ್ದಾಗ 20 ಲಕ್ಷ ಇದ್ದ ನಮ್ಮ ಸೈನ್ಯವನ್ನು 4 ಲಕ್ಷಕ್ಕೆ ಇಳಿಸಿದರು. 62ರ ಯುದ್ಧದಲ್ಲಿ ಅದರ ಪರಿಣಾಮ ಆಗಿತ್ತು. ಚೀನಾದವರು ನಮ್ಮ ಜಾಗವನ್ನು ಅತಿಕ್ರಮಿಸುವಂತಾಯಿತು ಎಂದರು.
ಅಗ್ನಿವೀರ್ ಯೋಜನೆಯನ್ನು ರಾಹುಲ್ ಗಾಂಧಿಯವರು ಅಸಂಬದ್ಧವಾಗಿ ಟೀಕಿಸಿದ್ದಾರೆ. ಅಗ್ನಿವೀರರನ್ನು ಕಸ, ಕಾರ್ಮಿಕರಂತೆ ಬಳಸಿ ಆಚೆಗೆ ಎಸೆಯುತ್ತಾರೆ ಎಂಬಂತೆ ಮಾತನಾಡಿದ್ದಾರೆ. ಆದರೆ, ಅವರು ಸೇವೆಯಲ್ಲಿ ಇರುವಾಗ ಹುತಾತ್ಮರಾದರೆ ಒಂದು ಕೋಟಿ ಒಂದು ಲಕ್ಷ ಮನೆಯವರಿಗೆ ಸಿಗುತ್ತದೆ ಎಂದು ಮಾಹಿತಿ ನೀಡಿದರು.
ಇಬ್ಬರು ಹುತಾತ್ಮರ ಪೈಕಿ ಈಗಾಗಲೇ ಒಬ್ಬರಿಗೆ ಒಂದು ಕೋಟಿ, ಇನ್ನೊಬ್ಬರಿಗೆ ಒಂದು ಕೋಟಿ 65 ಲಕ್ಷ (65 ಲಕ್ಷ ರಾಜ್ಯದ ಪರಿಹಾರ) ಲಭಿಸಿದೆ. ಹರಿಯಾಣ, ಪಂಜಾಬ್, ಉತ್ತರ ಪ್ರದೇಶಗಳು ರಾಜ್ಯದ ಪರಿಹಾರವಾಗಿ ಹೆಚ್ಚು ಮೊತ್ತ ಕೊಡುತ್ತವೆ. ಕರ್ನಾಟಕವು ಅಂಥ ಪರಿಹಾರ ಕೊಡುತ್ತಿಲ್ಲ ಎಂದೂ ತಿಳಿಸಿದರು.
ಕ್ಯಾಂಟೀನ್ ತೆರಿಗೆಯನ್ನು ಕೇಂದ್ರ ರದ್ದು ಮಾಡಿದ್ದರೆ, ಸಿದ್ದರಾಮಯ್ಯರ ಸರ್ಕಾರ ಅದನ್ನೂ ವಿಧಿಸುತ್ತಿದೆ ಎಂದು ಹೇಳಿದರು. ದೇಶದಲ್ಲಿ ಇದೀಗ ಸೈನ್ಯ ನೇಮಕಾತಿಗೆ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಅಗ್ನಿಪಥ್ ನೇಮಕಾತಿ ಯೋಜನೆಯಡಿ ಅಗ್ನಿವೀರರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಸೈನ್ಯದ ಚಿತ್ರಣ ಬದಲಿಸುವುದೇ ಇದರ ಮುಖ್ಯ ಉದ್ದೇಶ, ನಮ್ಮ ದೇಶದಲ್ಲಿ ಸೈನಿಕರ ಸರಾಸರಿ ವಯಸ್ಸು 32 ಇದೆ. ಪಾಕ್ ಸೈನಿಕರ ಸರಾಸರಿ ವಯಸ್ಸು ಸುಮಾರು 28 ಇದೆ. ಕಾರ್ಗಿಲ್ ಯುದ್ಧವಾದ ಬಳಿಕ ಸರಾಸರಿ ವಯಸ್ಸನ್ನು ಇಳಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೇನೆಯಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಡಿಮೆ ಸಂಖ್ಯೆಯ ಮಾರ್ಗದರ್ಶಕರು ಇರಬೇಕು. ದೇಶ ನಿರ್ಮಾಣಕ್ಕೆ ಯುವಜನರಿಗೆ ಅವಕಾಶ ಕೊಡಲು ಸೈನ್ಯದಲ್ಲಿ ಸೇರ್ಪಡೆಯ ಅವಕಾಶವನ್ನು ಅಗ್ನಿಪಥದ ಮೂಲಕ ನರೇಂದ್ರ ಮೋದಿ ಅವರು ನೀಡುತ್ತಿದ್ದಾರೆ. ಇದರಡಿ ಸೇವೆ ಮುಗಿಸಿ ಹೊರಬಂದಾಗ ಗರಿಷ್ಠ 25, ಕನಿಷ್ಠ 21 ವರ್ಷವಾಗಿರುತ್ತದೆ. ಅವರಿಗೆ ಸುಮಾರು 13 ಲಕ್ಷ ನಗದು ಸಿಗುತ್ತದೆ. ಆ ನಗದಿನಿಂದ ಸ್ಟಾರ್ಟಪ್ ಬಿಸಿನೆಸ್ ಸೇರಿ ಯಾವುದಾದರೂ ಉದ್ಯೋಗದ ಮೂಲಕ ದೇಶದ ಸಂಪತ್ತಾಗಲು ಸಾಧ್ಯವಿದೆ ಎಂದು ವಿವರಿಸಿದರು.
ಈಗ ಪಿಯುಸಿ ಆಗಿದ್ದರೆ ಮಾತ್ರ ಸೇನೆ, ನೇವಿ ಅಥವಾ ಏರ್‍ಫೋರ್ಸ್ ಸೇರಲು ಅವಕಾಶವಿದೆ. ಉತ್ತಮರಲ್ಲಿ ಅತ್ಯುತ್ತಮರನ್ನು ಆಯ್ಕೆ ಮಾಡಲಾಗುತ್ತದೆ. 400- 500 ಜನರು ಬಂದರೆ ಕೆಲವರಷ್ಟೇ ಆಯ್ಕೆಯಾಗುತ್ತಾರೆ. ಈಗ ಭೂಮಿ, ಆಕಾಶ, ಸಮುದ್ರ ಮಾತ್ರವಲ್ಲದೆ, ಬಾಹ್ಯಾಕಾಶಕ್ಕೂ ಯುದ್ಧವ್ಯಾಪ್ತಿ ವಿಸ್ತರಿಸಿದೆ. ಒನ್ ರ್ಯಾಂಕ್ ಒನ್ ಪೆನ್ಶನ್ ಮೂಲಕ ಮೋದಿಯವರು ನಮ್ಮನ್ನು ಸಮಾಜದಲ್ಲಿ 7-8 ಹೆಜ್ಜೆ ಮುಂದಕ್ಕೆ ತಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕೆಲಸದಿಂದ ಹೊರಬಂದ ಅಗ್ನಿವೀರರಿಗೆ ರಕ್ಷಣಾ ಇಲಾಖೆಯಲ್ಲಿ ಶೇ.10ರಷ್ಟು ಕೆಲಸ ಮೀಸಲಾತಿ, 9 ರಕ್ಷಣಾ ಇಲಾಖೆಯ ಸಾರ್ವಜನಿಕ ರಂಗದ ಉದ್ಯಮಗಳಲ್ಲಿ (ಪಿಎಸ್‍ಯು) ಶೇ. 10 ರಷ್ಟು ಉದ್ಯೋಗ ಮೀಸಲಾತಿ ಲಭ್ಯವಿದೆ. ಪೊಲೀಸ್, ಕೋಸ್ಟ್ ಗಾರ್ಡ್, ಏರ್‍ಪೋರ್ಟ್ ಅಥಾರಿಟಿ ಮೊದಲಾದವುಗಳಲ್ಲೂ ಇಂಥವರಿಗೆ ಉದ್ಯೋಗ ಮೀಸಲಾತಿ ಇದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಪೂರ್ವ ಸೈನಿಕರ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಸುಬೇದಾರ್ ಬಸವರಾಜ ಬಿರಾದಾರ್, ರಾಜ್ಯ ವಕ್ತಾರ ಗೋವಿಂದರಾಜ್ ಎಸ್.ಎಚ್, ರಾಜ್ಯ ಆರ್ಥಿಕ ಪ್ರಕೋಷ್ಟದ ಸಂಚಾಲಕ ಕಿರಣ್ ಅಣ್ಣಿಗೇರಿ ಅವರು ಉಪಸ್ಥಿತರಿದ್ದರು.
ಓದಿ : ಸಿಎಂ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ್ದು: ಕುಮಾರಸ್ವಾಮಿ - HD Kumaraswamy