ಬೆಂಗಳೂರು: ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿದೆಯೋ ಅಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಸಚಿವ ನಾಗೇಂದ್ರ ಆರೋಪಿಸಿದ್ದಾರೆ.
ವಾಲ್ಮೀಕಿ ಅಭಿವೃದ್ದಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜೈಲಿನಿಂದ ಹೊರಬಂದ ಬಳಿಕ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ಹಗರಣದಲ್ಲಿ ಏನೂ ಪಾತ್ರವಿಲ್ಲದಿದ್ದರೂ ಏಕಾಏಕಿ ಬಂಧಿಸಿ ಮೂರು ತಿಂಗಳಿಂದ ಇ.ಡಿ.(ಜಾರಿ ನಿರ್ದೇಶನಾಲಯ) ನನಗೆ ಸಾಕಷ್ಟು ಕಿರುಕುಳ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಹೇಳಲು ಅವರು ಒತ್ತಾಯಿಸಿದರು ಎಂದು ಹೇಳಿದರು.
ವಾಲ್ಮೀಕಿ ಹಗರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಇದೆಲ್ಲಾ ಬಿಜೆಪಿಯವರ ಷಡ್ಯಂತ್ರ. ಮುಡಾ ಹಗರಣದಲ್ಲೂ ಅದೇ ರೀತಿ ಮಾಡಿದರು. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದರು. ಇದರಿಂದ ಸಾಧಿಸಿದ್ದೇನೂ ಇಲ್ಲ. ಹೊಟ್ಟೆ ಕರಗಿಸಲು ಪಾದಯಾತ್ರೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಇ.ಡಿ.ಯವರು ವಿನಾಕಾರಣ ಸಿದ್ದರಾಮಯ್ಯರ ಹೆಸರು ತಳುಕುಹಾಕಲು ಷಡ್ಯಂತ್ರ ಮಾಡಿದರು. ನ್ಯಾಯಾಂಗದ ಮೇಲೆ ಕಾಂಗ್ರೆಸ್ಗೆ ನಂಬಿಕೆ ಇದೆ. ನನಗೆ ಬೇಲ್ ಸಿಕ್ಕಿದೆ. ಒಂದಂತೂ ಸತ್ಯ, ಯಾವುದೇ ಕಾರಣಕ್ಕೂ ಹಣ ದುರ್ಬಳಕೆ ಆಗಿಲ್ಲ. ಬಿಜೆಪಿಯನ್ನು ಕರ್ನಾಟಕದಿಂದ ಕಿತ್ತೊಗೆಯುವ ಕೆಲಸವನ್ನು ನಾವು ಮಾಡ್ತೀವಿ ಎಂದು ನಾಗೇಂದ್ರ ಹೇಳಿದರು.