ಚಿತ್ತಾಪೂರ: ಇಂದು ಭಾರತ ಜಗತ್ತಿನ ಅತಿದೊಡ್ಡ ಸಂವಿಧಾನ ಬದ್ಧ ರಾಷ್ಟ್ರವಾಗಿದೆ. ವಿಭಿನ್ನ ಧರ್ಮ, ಜಾತಿಗಳ ಜನರಿಗೆ ಅವಕಾಶ ಹಾಗೂ ಸೌಲಭ್ಯಗಳು ಸಮಾನವಾಗಿ ಸಿಗಲು ಸಂವಿಧಾನ ಕಾರಣವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ವಾಡಿ ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಸೇರಿ ಅಂದಾಜು 423.09 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಐದು ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಭಿಮಾನದ ಬದುಕು ಹಾಗೂ ಆರ್ಥಿಕ ಸಮಾನತೆ ಸಿಗುತ್ತಿದೆ. ಸಂವಿಧಾನದ 75 ವರ್ಷದ ಆಚರಣೆ ಮಾಡುವುದರ ಜೊತೆಗೆ ಬಸವಣ್ಣನವರ ತತ್ವಗಳ ಆಧಾರದ ಮೇಲೆ ಯೋಜನೆಗಳು ಹಾಗೂ ನೀತಿಗಳನ್ನು ರೂಪಿಸಲಾಗುತ್ತಿದೆ. ಹಾಗಾಗಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರು ಎಂದು ಘೋಷಿಸಲಾಗಿದೆ. ಬಸವ ತತ್ವಕ್ಕೂ ಸಂವಿಧಾನದ ಆಶಯಕ್ಕೆ ನಂಟಿದೆ. ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಈ ಎರಡರಲ್ಲಿದೆ ಎಂದರು.
ಯಾರೂ ಕೂಡಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಂತೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ, ಜನರ ಆರ್ಥಿಕ ಸ್ಥಿತಿಗತಿ ಹಾಗೂ ಸಂಕಟ ಅರಿತುಕೊಂಡು ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು ಅದರಂತೆ ಜಾರಿಗೆ ತಂದಿದ್ದೇವೆ. ಆದರೆ, ಬಿಜೆಪಿಯವರು ಇದನ್ನು ವಿರೋಧಿಸುತ್ತಿದ್ದಾರೆ. ಯಾಕೆಂದರೆ, ಅವರಿಗೆ ಸಾಮಾನ್ಯ ಜನರು ಮನೆ ನಡೆಸಲು ಪಡುವ ಕಷ್ಟದ ಅರಿವಿಲ್ಲ. ಅವರಿಗೆ ಮನೆ ನಡೆಸುವುದು ಗೊತ್ತಿಲ್ಲ, ಮನೆ ಮುರಿಯುವುದು ಮಾತ್ರ ಗೊತ್ತಿದೆ ಎಂದು ಟೀಕಿಸಿದರು.
ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಂದಾಗಿ ಜನರು ನೆಮ್ಮದಿಯಿಂದ ಇದ್ದಾರೆ. ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳುತ್ತಿದೆ. ಆದರೆ, ಬಿಜೆಪಿ ಸಾರ್ವಜನಿಕರ ದುಡ್ಡನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರು. ಯಾವುದೇ ಕಾರಣಕ್ಕೂ ಅರ್ಥಿಕ ಸ್ಥಿರತೆ ತಂದುಕೊಡುವ ಈ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಈ ವಿಚಾರದಲ್ಲಿ ಬಿಜೆಪಿಯವರ ಸುಳ್ಳು ಹೇಳಿಕೆಗಳನ್ನು ನಂಬಬೇಡಿ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಕಾಪಿ ಮಾಡಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಆದರೆ, ಆರ್ಥಿಕ ಅಸಮಾನತೆ, ನಿರುದ್ಯೋಗ, ಸುಳ್ಳು, ಕೋಮುಗಲಭೆಗಳು ಮೋದಿ ಗ್ಯಾರಂಟಿಗಳು ಎಂದು ಕುಟುಕಿದರು.
ಚಿತ್ತಾಪುರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ಅನ್ಯಾಯವಾಗಿದೆ. ನಾನು ಇತ್ತೀಚಿಗೆ ಸಚಿವನಾಗಿದ್ದೇನೆ, ಕ್ಷೇತ್ರಕ್ಕೆ ಅನುದಾನ ತಂದು ಸಮಗ್ರ ಅಭಿವೃದ್ದಿಪಡಿಸುತ್ತೇನೆ. ಇಂದು ಸುಮಾರು ರೂ 423 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದೇನೆ ಎಂದರು.
ಇದನ್ನೂ ಓದಿ: ನಮ್ಮ ಗ್ಯಾರಂಟಿ ಹೀಯಾಳಿಸುತ್ತಿದ್ದ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಹೊಗಳುತ್ತಿದ್ದಾರೆ: ಮಧು ಬಂಗಾರಪ್ಪ