ಚಿಕ್ಕೋಡಿ: ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಬಾರದ ಮರಾಠಿ ಶಿಕ್ಷಕರನ್ನು ಮಹಾರಾಷ್ಟ್ರ ಸರ್ಕಾರ ನೇಮಕ ಮಾಡಿರುವ ಕುರಿತು ಈಟಿವಿ ಭಾರತ ಕಳೆದ ವಾರ ಸಮಗ್ರವಾದ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡು ಮಹಾರಾಷ್ಟ್ರ ರಾಜ್ಯದಲ್ಲಿರುವ ಕನ್ನಡ ಶಾಲೆಗಳಿಗೆ ಗಡಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಇನ್ನಿತರು ಮಂಗಳವಾರ ಮತ್ತು ಇವತ್ತು ಗಡಿಯಲ್ಲಿ ಇರುವ ಕನ್ನಡ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನ ಬೋರಗಿ, ಕರಜಗಿ, ಭೇವರ್ಗಿ, ಬಾಲಗಾಂವ, ಅಂಕಲಗಿ, ಸಂಖ, ರಾವಳಗುಂಡವಾಡಿ, ಮೇಂಡಿಗೇರಿ ಗ್ರಾಮಗಳಲ್ಲಿನ ವಿವಿಧ ಕನ್ನಡ ಮಾಧ್ಯಮ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತ್ತ ತಾಲೂಕಿನ ಕನ್ನಡ ಮಾದ್ಯಮ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರದ ಕನ್ನಡ ಬಾರದ 11 ಜನ ಮರಾಠಿ ಶಿಕ್ಷಕರನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿತ್ತು.
ಜತ್ತ ಕ್ಷೇತ್ರದ ಶಾಸಕ ವಿಕ್ರಮಸಿಂಹ ಸಾವಂತ, ಜತ್ತ ಭಾಗದ ಕನ್ನಡ ಪರ ಪದಾಧಿಕಾರಿಗಳಾದ ಆರ್. ಜಿ. ಬಿರಾದಾರ ಜೊತೆಗೆ ಹಲವರು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಸಾಥ್ ನೀಡಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕನ್ನಡ ಶಾಲೆಗೆ ನೇಮಕವಾದ ಮರಾಠಿ ಶಿಕ್ಷಕರನ್ನು ಮಾತನಾಡಿಸಿದರು. ಆಗ ಅವರಿಗೆ ಕನ್ನಡ ಬಾರದೇ ಇರುವುದು ಸ್ವತಃ ನೇಮಕಗೊಂಡ ಶಿಕ್ಷಕರ ಮಾತಿನಿಂದಲೇ ನಿಯೋಗಕ್ಕೆ ಮನವರಿಕೆಯಾಗಿದೆ. 11 ಶಿಕ್ಷಕರ ಪೈಕಿ ಒರ್ವ ಶಿಕ್ಷಕ ಈಗಾಗಲೇ ತನಗೆ ಕನ್ನಡ ಬರುವುದಿಲ್ಲ ಎಂದು ಲಿಖಿತವಾಗಿ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿರುವ ಪತ್ರವನ್ನು ಅಧ್ಯಕ್ಷರಿಗೆ ತೋರಿಸಿದರು.
ನಂತರ ಗಡಿನಾಡು ಪ್ರಾಧಿಕಾರ ಅಭಿವೃದ್ಧಿ ಅಧ್ಯಕ್ಷರು, ಜತ್ತ ಶಾಸಕ ವಿಕ್ರಮ್ ಸಾವಂತ ಮತ್ತು ಮಹಾರಾಷ್ಟ್ರ ಜಿಲ್ಲೆಯ ಸಾಂಗ್ಲಿ ಡಿಡಿಪಿಐ ಮೋಹನ್ ಗಾಯಕವಾಡ ಹಾಗೂ ಜತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಾಮ ಫರಕಾಂಡೆ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವಿಷಯದ ಕುರಿತು ಸಭೆ ನಡೆಸಲಾಯಿತು.
ಕನ್ನಡ ಮಾಧ್ಯಮ ಶಾಲೆಗೆ ಮರಾಠಿ ಶಿಕ್ಷಕರ ಕಾನೂನು ಬಾಹಿರವಾಗಿ ನೇಮಕಾತಿ ಮಾಡಿದ ಬಗ್ಗೆ ಮತ್ತು ಭಾರತ ಸಂವಿಧಾನ ಕಲಂ 350ಎ ಉಲ್ಲಂಘನೆ ಮಾಡಿ ನೇಮಕಾತಿ ಮಾಡಿದ ಬಗ್ಗೆ ಗಡಿನಾಡಿನ ಕನ್ನಡಿಗರು ಅಧಿಕಾರಿಗಳ ಗಮನಕ್ಕೆ ತಂದರು. ಸಮಗ್ರ ಸಭೆಯ ನಂತರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾದೇಶಿಕ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು, ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲಾಧಿಕಾರಿ ಡಾ. ರಾಜು ದಯಾನಿಧಿ ಅವರಿಗೆ ಸಮಗ್ರವಾಗಿ ಹತ್ತು ಪುಟಗಳ ವರದಿಯನ್ನು ಸಲ್ಲಿಸಿದರು. ಗಡಿಯಲ್ಲಿ ನಡೆದ ಬೆಳವಣಿಗೆ ಕುರಿತು ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸುತ್ತೇನೆ ಎಂದು ಗಡಿನಾಡು ಕನ್ನಡಿಗರಿಗೆ ಅಧ್ಯಕ್ಷರು ತಿಳಿಸಿದರು.
ಇದನ್ನೂ ಓದಿ: ವಿಷಮುಕ್ತ ಭಾರತ ನಿರ್ಮಾಣಕ್ಕೆ ಬೆಳಗಾವಿ ರೈತನ ಪಣ: ಸಾವಯವ ಕೃಷಿಯಲ್ಲೇ ಸುಖ ಕಂಡ ಹಾದಿಮನಿ ಮನೆತನ - Organic Farming