ಬೆಂಗಳೂರು: ಕರ್ತವ್ಯನಿರತ ಪಿಜಿ ವೈದ್ಯೆ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಶನಿವಾರ ಇಎಸ್‌ಐ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ರಾಜಾಜಿನಗರದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು.
ಕೋಲ್ಕತ್ತಾದಲ್ಲಿ ನಡೆದ ಘಟನೆ ಊಹೆಗೂ ನಿಲುಕದ್ದಾಗಿದೆ. ವೈದ್ಯರಿಗೆ ಅವರದೇ ಆಸ್ಪತ್ರೆಗಳಲ್ಲಿ ಸುರಕ್ಷತೆ ಇಲ್ಲದಿದ್ದರೆ, ಈ ದೇಶದಲ್ಲಿ ಸುರಕ್ಷತೆ ಖಾತ್ರಿ ಯಾರಿಗಿದೆ?. ಇದು ಈಗ ವೈದ್ಯರ ಸಮಸ್ಯೆ ಮಾತ್ರವಲ್ಲ, ದೇಶದ ಜನರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಚಳವಳಿಯನ್ನು ನಾವು ಬಲಪಡಿಸಬೇಕಾಗಿದೆ. ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ನಡೆದದ್ದು ಮರುಕಳಿಸಬಾರದು. ಈ ಬಿಕ್ಕಟ್ಟಿನ ಸಮಯದಲ್ಲಿ ಇಡೀ ವೈದ್ಯಕೀಯ ಭ್ರಾತೃತ್ವವು ಒಂದುಗೂಡಬೇಕು. ಈ ಕೂಡಲೇ ಆಕೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಹಲವು ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಕಾಲೇಜಿನಲ್ಲಿ ಅಂತ್ಯಗೊಳಿಸಿ ಮುಂದಿನ ಭಾಗವಾಗಿ ಫ್ರೀಡಂ ಪಾರ್ಕ್ ಕಡೆ ವಿದ್ಯಾರ್ಥಿಗಳು ನೆಡೆದರು. ಈ ಪ್ರತಿಭಟನೆಗೆ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿಯಿಂದ ಬೆಂಬಲ ನೀಡಲಾಗಿತ್ತು.
ಇನ್ನೆಷ್ಟು ಬಲಿ ಬೇಕು?: ಮತ್ತೊಂದೆಡೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆಯನ್ನು ಗಂಭೀರವಾಗಿ ಪರಿಗಣಿಸಲು ಇನ್ನೆಷ್ಟು ಬಲಿ ಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು. ಶನಿವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಬಳಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಸಂದೇಶ್‌ಖಲಿ ಪ್ರಕರಣ ನಡೆದಾಗ ಕೂಡ ಪಶ್ಚಿಮ ಬಂಗಾಳ ಸರ್ಕಾರ ಎಚ್ಚತ್ತುಕೊಳ್ಳಲಿಲ್ಲ. ಈಗ ಪಶ್ಚಿಮ ಬಂಗಾಲದ ಕೋಲ್ಕತ್ತದ ವೈದ್ಯೆ ಹತ್ಯೆ ನೆಡೆದರೂ ಇಂಡಿ ಒಕ್ಕೂಟ ಬಾಯಿ ಮುಚ್ಚಿಕೊಂಡಿದೆ ಎಂದು ಕಿಡಿಕಾರಿದರು.
ಸಂತ್ರಸ್ತೆ ಬಡ ಕುಟುಂಬದಿಂದ ಬಂದವಲಾಗಿದ್ದಳು. ಆಕೆಯ ತಾಯಿ ಎಷ್ಟೋ ಕಷ್ಟ ಪಟ್ಟು ಆಕೆಯನ್ನು ವೈದ್ಯೆಯನ್ನಾಗಿ ಮಾಡಿ ತಮಗಷ್ಟೇ ಅಲ್ಲದೆ, ಸಮಾಜಕ್ಕೂ ಆಧಾರವಾಗುವ ಕನಸು ಕಂಡಿದ್ದರು. ಆಕೆಯ ಹತ್ಯೆ ನಡೆದಿದೆ. ಇವತ್ತು ಹೈಕೋರ್ಟ್ ಮಧ್ಯಪ್ರವೇಶದಿಂದ ಸಿಬಿಐ ತನಿಖೆಗೆ ಆದೇಶವಾಗಿದೆ. ಸ್ಥಳೀಯ ಆಡಳಿತದಿಂದ, ರಾಜ್ಯ ಸರ್ಕಾರದಿಂದ ನ್ಯಾಯ ಸಿಗದು ಎಂದು ಹೈಕೋರ್ಟ್ಗೆ ಕೂಡ ಅನಿಸಲು ಆರಂಭವಾಗಿದೆ ಎಂದರು.