ಬೆಂಗಳೂರು: ವಂಚಿತರು, ಬಡವರು, ಮಹಿಳೆಯರು ಮತ್ತು ಮಧ್ಯಮ ವರ್ಗ ಸೇರಿದಂತೆ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಸಿದ ಅವರು, ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಬಜೆಟ್ನಲ್ಲಿ ಸ್ಪಷ್ಟ ಮುನ್ನೋಟ ನೀಡಿದೆ. ಬಜೆಟ್ ಮುಖಪುಟದಲ್ಲಿ ಸಂವಿಧಾನದ ಪೀಠಿಕೆಯನ್ನು ಮುದ್ರಿಸಿದ್ದು, ನಮ್ಮ ಸರ್ಕಾರಕ್ಕೆ ಸಂವಿಧಾನವೇ ಪರಮೋಚ್ಛ ಎಂಬುದನ್ನೂ ನಿರೂಪಿಸಲಾಗಿದೆ. ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್ಪ್ರಿಟೇಷನ್ ಕೇಂದ್ರ ನಿರ್ಮಿಸಲು 25 ಕೋಟಿ ರೂ. ನೀಡಿದ್ದು, ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಪ್ರಕಟಿಸಿರುವುದು ಪರಿಸರ ಪ್ರವಾಸೋದ್ಯಮಕ್ಕೆ ಇಂಬು ನೀಡುತ್ತದೆ ಎಂದರು.
ಆನೆ ಮತ್ತು ಚಿರತೆ ಕಾರ್ಯಪಡೆಗಳ ಉನ್ನತೀಕರಣ: ಈಗಾಗಲೇ ರಚಿಸಲಾಗಿರುವ 7 ಆನೆ ಕಾರ್ಯಪಡೆ ಮತ್ತು 2 ಚಿರತೆ ಕಾರ್ಯಪಡೆ ಕಾರ್ಯಕ್ಷಮತೆ ಹೆಚ್ಚಿಸಲು 40 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಜೊತೆಗೆ ಪ್ರಸಕ್ತ ಸಾಲಿನಲ್ಲಿ ಕೂಡ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಮುಖ್ಯತೆ ನೀಡುವುದಾಗಿ ಪ್ರಕಟಿಸಿರುವುದು ಮಾನವ ವನ್ಯಜೀವಿ ಸಂಘರ್ಷದ ತ್ವರಿತ ಸ್ಪಂದನೆಗೆ ಸಹಕಾರಿಯಾಗಲಿದೆ. ಬೀದರ್ ಜಿಲ್ಲೆ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರ ಜೀವ ವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗೆ 15 ಕೋಟಿ ರೂ.ಅನುದಾನ ಒದಗಿಸಿರುವುದನ್ನು ಸ್ವಾಗತಾರ್ಹ ಎಂದರು
ಸುಗಮ ವ್ಯಾಪಾರಕ್ಕೆ ಒತ್ತು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮ್ಮತಿ ಪತ್ರಗಳನ್ನು ಒಗ್ಗೂಡಿಸಿ ಸರಳೀಕರಣಗೊಳಿಸುವ ಮೂಲಕ ಸುಗಮ ವ್ಯಾಪಾರಕ್ಕೆ ಒತ್ತು ನೀಡಲಾಗಿದ್ದು, ಮಂಡಳಿಯ ಕಾರ್ಯಕ್ಷಮತೆ ಹೆಚ್ಚಿಸಲು ಅನುಮತಿ ಮತ್ತು ಪ್ರಮಾಣಪತ್ರಗಳ ನೀಡಿಕೆಗೆ ಏಕ ಗವಾಕ್ಷಿ ಯೋಜನೆ ತರುವ ಯೋಜನೆ ಕ್ರಾಂತಿಕಾರಿ ಹೆಜ್ಜೆ ಇದಾಗಿದೆ.
ತ್ಯಾಜ್ಯ ಜಲವನ್ನು ಸಂಸ್ಕರಿಸಲು ಕ್ರಮ ವಹಿಸಲಾಗಿದ್ದು, ಈ ಸಂಸ್ಕರಣೆಯ ನಂತರ ಬಳಸಿ ಉಳಿಯುವ ನೀರನ್ನು ಮನೆ ಬಳಕೆಯ ಹೊರತಾಗಿ ಕಟ್ಟಡ ನಿರ್ಮಾಣ ಇತ್ಯಾದಿಗೆ ಮಂಡಳಿಯು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಮರುಬಳಕೆಗೆ ಪ್ರೋತ್ಸಾಹ ನೀಡಿರುವುದು ನೀರಿನ ಕೊರತೆಗೆ ಪರಿಹಾರವಾಗಲಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, 5000ಕೋಟಿ ರೂ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪ್ರಾರಂಭ ಹಾಗೂ ಕೆಕೆಆರ್. ಡಿ. ಬಿ.ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜುಗಳು ನಮ್ಮ ಭಾಗದಲ್ಲಿನ ಶೈಕ್ಷಣಿಕ ಪ್ರಗತಿಗೆ ಕಾರಣವಾಗಲಿದೆ.
ಬೀದರ್ ನಾನಕ್ ಝೀರಾ ಸಾಹೇಬ್ ಗುರುದ್ವಾರ ಅಭಿವೃದ್ದಿಗೆ 1ಕೋಟಿ ರೂ., ಔರಾದ್ ನೀರಾವರಿ ಯೋಜನೆ, ಬೀದರ್- ಬೆಂಗಳೂರು ನಡುವಿನ ಆರ್ಥಿಕ ಕಾರಿಡಾರ್, ಬೀದರ್ ಜಿಲ್ಲಾ ಸಂಕೀರ್ಣ ಜಿಲ್ಲೆಗೆ ಬಜೆಟ್ ಕೊಡುಗೆಯಾಗಿದೆ.
ಮುಖ್ಯಮಂತ್ರಿಯವರು ಹಣಕಾಸು ಸಚಿವರಾಗಿ ತಾವು ಪಡೆದ ಸುದೀರ್ಘ ಅನುಭವವನ್ನು ಈ ಬಜೆಟ್ ನಲ್ಲಿ ಧಾರೆ ಎರೆದಿದ್ದು, ಕಲ್ಯಾಣ ರಾಜ್ಯದ ಕನಸು ನನಸು ಮಾಡುವ ಸಂಯಕ್ ನೋಟವನ್ನು ಮುಂದಿಟ್ಟಿದ್ದಾರೆ. ಈ ಮೂಲಕ 1 ಟ್ರಿಲಿಯನ್ ಆರ್ಥಕ ರಾಜ್ಯ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಸಿದ್ದು ಬಜೆಟ್ನಲ್ಲಿ ಯಾವ ಜಿಲ್ಲೆಗೆ ಏನೆಲ್ಲ ಸಿಕ್ತು: ಇಲ್ಲಿದೆ ಸಂಕ್ಷಿಪ್ತ ಮಾಹಿತಿ