ಚಿಕ್ಕಮಗಳೂರು: ಬೇಲೂರಿನ ಕಾಡಿನಲ್ಲಿದ್ದ ಬೀಟಮ್ಮ ಎಂಬ ಹೆಣ್ಣಾನೆ ಒಳಗೊಂಡು 30ಕ್ಕೂ ಕಾಡಾನೆಗಳು ಚಿಕ್ಕಮಗಳೂರು ಹೊರವಲಯದ ಪ್ರದೇಶಗಳಲ್ಲಿ ಬೀಡುಬಿಟ್ಟಿವೆ. ಇದು ಜನರಲ್ಲಿ ಆತಂಕ ಉಂಟುಮಾಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಶಾಲೆಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿದೆ.
ಅಂಬರ ವ್ಯಾಲಿ ಶಾಲೆಯ ಹಿಂಭಾಗ, ಶಕ್ತಿ ನಗರ, ಕದ್ರಿ ಮಿದ್ರಿ, ಮೂಗ್ತಿಹಳ್ಳಿ ಸಮೀಪ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀಟಮ್ಮ ಗುಂಪಿನ ಕಾಡಾನೆಗಳು ಸೋಮವಾರ ಕಾಣಿಸಿಕೊಂಡಿವೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕು ಎಂದು ಅರಣ್ಯ ಇಲಾಖೆ ಜನರಿಗೆ ತಿಳಿಸಿದೆ.
ಈ ಕುರಿತು ಡಿಎಫ್‌ಒ ರಮೇಶ್ ಬಾಬು 'ಈಟಿವಿ ಭಾರತ'ದೊಂದಿಗೆ ಮಾತನಾಡಿ, "ಚಿಕ್ಕಮಗಳೂರು ತಾಲೂಕಿನಲ್ಲಿ ಕಾಡಾನೆಗಳ ಹಿಂಡು ತೋಟ, ಭತ್ತದ ಗದ್ದೆ, ಕಬ್ಬಿನ ಗದ್ದೆಗಳಿಗೆ ನುಗ್ಗುತ್ತಿವೆ. ಎರಡು ದಿನಗಳಲ್ಲಿ ಅಪಾರ ಪ್ರಮಾಣದ ಕೃಷಿ, ಬೆಳೆ ನಾಶವಾಗಿದೆ. ಬೀಟಮ್ಮ 30ಕ್ಕೂ ಹೆಚ್ಚು ಆನೆಗಳನ್ನು ಒಟ್ಟುಗೂಡಿಸಿಕೊಂಡು ಆಗಮಿಸಿದೆ. ಈ ಹಿಂಡನ್ನು ಆದಷ್ಟು ಬೇಗ ಕಾಡಿಗಟ್ಟಬೇಕೆಂದು ಜನರು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ".
"ಆನೆ ಬೀಡು ಬಿಟ್ಟಿರುವ ಸ್ಥಳಗಳನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಕೈಗೊಂಡು ಬಂದ್ ಮಾಡಲಾಗಿದೆ. ಕೆಎಸ್‌ಆರ್‌ಪಿ ತುಕಡಿ ಹಾಗೂ ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದಾರೆ. ಆನೆ ಬೀಡು ಬಿಟ್ಟಿರುವ ಸುತ್ತಮುತ್ತಲಿನ ಪ್ರದೇಶದ ಎಲ್ಲ ಶಾಲಾ, ಕಾಲೇಜುಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ" ಅವರು ತಿಳಿಸಿದ್ದಾರೆ.
ಇದನ್ನೂಓದಿ: ಶಿವಮೊಗ್ಗ: ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಲೋಕಾರ್ಪಣೆ