ಚಾಮರಾಜನಗರ: ಬಿಳಿಗಿರಿ ರಂಗಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೊಂದು ಆನೆ ಕಳೇಬರ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಶನಿವಾರ ಸಂಜೆ ಮಾಹಿತಿ ನೀಡಿದೆ. ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದ ಮಾವತ್ತೂರು ಬಿ ಗಸ್ತಿನಲ್ಲಿ ಹೆಣ್ಣಾನೆಯ ಕಳೇಬರ ಪತ್ತೆಯಾಗಿದೆ. ಇದು 60-65 ವರ್ಷದ ಹೆಣ್ಣಾನೆಯದ್ದು ಎಂದು ಅಂದಾಜು ಮಾಡಲಾಗಿದೆ.
ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಆನೆಯು ಸ್ವಾಭಾವಿಕವಾಗಿ 7-8 ದಿನಗಳ ಹಿಂದೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಯಳಂದೂರು ಮತ್ತು ಬೈಲೂರು ವಲಯದಲ್ಲಿ 2 ಆನೆಗಳು ಮೃತಪಟ್ಟಿದ್ದ ಬಗ್ಗೆ ಶುಕ್ರವಾರ(ಆ.30) ಅರಣ್ಯ ಇಲಾಖೆ ಮಾಹಿತಿ ಹಂಚಿಕೊಂಡಿತ್ತು.
ಬೈಲೂರು ವಲಯದ ಆಳದ ಕೆರೆಯ ಬಳಿ 45-50 ವರ್ಷದ ಗಂಡಾನೆ ಕಳೇಬರ ಪತ್ತೆಯಾಗಿದ್ದು, 7-8 ತಿಂಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿದೆ. ಹಾಗೆಯೇ ಯಳಂದೂರು ವಲಯದ ಬೇತಾಳಕಟ್ಟೆ ಎಂಬಲ್ಲಿ ಮತ್ತೊಂದು ಗಂಡಾನೆ ಆನೆ ಕಳೇಬರ ಪತ್ತೆಯಾಗಿದ್ದು, ಇದು 20-40 ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ. ಎರಡು ಆನೆಗಳ ದಂತಗಳು ಸುರಕ್ಷಿತವಾಗಿದ್ದು, ಅರಣ್ಯ ಇಲಾಖೆ ಮುಂದಿನ ಕ್ರಮ ಕೈಗೊಂಡಿದೆ ಎಂದು ಶುಕ್ರವಾರ ಅರಣ್ಯ ಇಲಾಖೆ ಮಾಹಿತಿ ನೀಡಿತ್ತು. ಆದರೆ ಇಂದು ಮತ್ತೊಂದು ಆನೆಯ ಕಳೇಬರ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದೆ.
ಒಂದೇ ವಾರದಲ್ಲಿ ಮೂರು ಆನೆಗಳ ಕಳೇಬರ ಪತ್ತೆಯಾದ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿದೆ.
ಇದನ್ನೂ ಓದಿ: ಬಿಆರ್ಟಿಯಲ್ಲಿ ಎರಡು ಆನೆ ಕಳೇಬರ ಪತ್ತೆ