ಚಿಕ್ಕಮಗಳೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗ ಸೂಚಿಗಳನ್ನು ಪಾಲಿಸದೇ ಖಾಸಗಿ ವಾಹನದಲ್ಲಿ ಬ್ಯಾಂಕ್‌ಗೆ ಸೇರಿದ ಹಣವನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ಎಸ್ಎಸ್ಟಿ ಅಧಿಕಾರಿಗಳು ತಪಾಸಣೆ ನಡೆಸಿ, 45 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿರುವ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಲ್ದೂರು ಹೋಬಳಿ ವ್ಯಾಪ್ತಿಯ ಮಾಚಗೊಂಡನಹಳ್ಳಿ ಎಂಬಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಎಸ್ಎಸ್ಟಿ ತಂಡ (ಸ್ಥಿರ ಕಣ್ಗಾವಲು ತಂಡ- Static Surveillance Team) ಮೂಡಿಗೆರೆಯಿಂದ ಚಿಕ್ಕಮಗಳೂರು ನಗರದತ್ತ ಬರುತ್ತಿದ್ದ ಖಾಸಗಿ ವಾಹನವೊಂದನ್ನು ತಪಾಸಣೆ ಮಾಡಿದೆ. ಈ ವೇಳೆ ವಾಹದಲ್ಲಿ 45 ಲಕ್ಷ ಹಣ ಇರುವುದು ಪತ್ತೆಯಾಗಿದೆ. ಹಣದ ಬಗ್ಗೆ ವಿಚಾರಣೆ ಮಾಡಿದ ವೇಳೆ, ಈ ಹಣ ವಿವಿಧ ಬ್ಯಾಂಕ್‌ಗಳಿಗೆ ಸೇರಿದ್ದು ಎಂದು ವಾಹನದಲ್ಲಿದ್ದವರು ತಿಳಿಸಿದ್ದಾರೆ.
ಬ್ಯಾಂಕ್ ಸೇರಿದ್ದ 45 ಲಕ್ಷ ಹಣ ವಶ: ಆದರೆ, ಬ್ಯಾಂಕ್‌ಗೆ ಸೇರಿದ ಹಣವನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ವಾಹನದಲ್ಲಿ ಆರ್‌ಬಿಐ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಆದರೆ, ಸಾಗಣೆ ಮಾಡುತ್ತಿದ್ದ ವಾಹನದಲ್ಲಿ ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲನೆ ಮಾಡದಿರುವುದು ಕಂಡು ಬಂದಿದೆ. ವಾಹನದಲ್ಲಿ ಗನ್ ಮ್ಯಾನ್, ಸಿಸಿಟಿವಿ ಇಲ್ಲದೇ, ಅದರಲ್ಲೂ ಖಾಸಗಿ ವಾಹನದಲ್ಲಿ ಹಣ ಸಾಗಣೆ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಹಣವನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದೆ. ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಸಮರ್ಪಕ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ವಶ
ಗದಗ ರಸ್ತೆ ಚೆಕ್ ಪೋಸ್ಟ್ನಲ್ಲಿ ದಾಖಲೆ ರಹಿತ 2 ಲಕ್ಷ ರೂ. ವಶ: ಹುಬ್ಬಳ್ಳಿ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. ಸಹಾಯಕ ಚುನಾವಣಾ ಅಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರ ನೇತೃತ್ವದಲ್ಲಿ ಗದಗ ರಸ್ತೆ ಚೆಕ್ ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ವೇಳೆ ದಾಖಲೆ ರಹಿತ ರೂ. 2 ಲಕ್ಷ ನಗದು ಪತ್ತೆಯಾಗಿದ್ದು, ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೆಎ-05 ಎಇ-3422 ನಂಬರ್ ಕಾರಿನಲ್ಲಿ ತಿಪಟೂರಿನಿಂದ ಹುಬ್ಬಳ್ಳಿಗೆ ದಾಖಲೆ ಇಲ್ಲದೇ ಹಣ ಸಾಗಿಸಲಾಗುತ್ತಿತ್ತು. ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಎಂಸಿಸಿ ನೋಡೆಲ್ ಅಧಿಕಾರಿ ರವೀಂದ್ರ ಕುಮಾರ್, ಕಿರಣ್ ಮಜ್ಜಿಗೇರಿ, ಕುಶಾಲ್ ಹುಕ್ಕೇರಿ, ಅಯ್ಯಪ್ಪ ಮನ್ನಿಕೇರಿ, ಲೋಕೇಶ್ ಶಿರಹಟ್ಟಿ, ಮಂಜುನಾಥ, ದೇವಪ್ಪ ಭಾಗವಹಿಸಿದ್ದರು.
ಇದನ್ನೂ ಓದಿ: ಚಾಮರಾಜನಗರ ಡಿಸಿಗೆ ಬಂದ ಫೋನ್ ಕರೆ; 98 ಕೋಟಿ ಮೌಲ್ಯದ ಬಿಯರ್ ವಶ, ಫ್ಯಾಕ್ಟರಿ ಸೀಜ್ - FACTORY SEIZE