ಬೆಂಗಳೂರು: ತಂಗಿ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಅಕ್ಕನನ್ನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ, 5.50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಶಶಿಕಲಾ (30) ಬಂಧಿತೆ ಆರೋಪಿ. ಆರೋಪಿಯ ತಂಗಿ ಚಂದ್ರಿಕಾ ನೀಡಿದ ದೂರು ನೀಡಿದ ಮೇರೆಗೆ ಅಕ್ಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಡುಗೋಡಿ ವಿಎಸ್ಆರ್ ಬಡಾವಣೆಯಲ್ಲಿ ವಾಸವಾಗಿರುವ ಚಂದ್ರಿಕಾ, ಪಿ.ಜಿ.ಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಪತಿ ಶರವಣ ಟಾಟಾ ಎಸಿ ವಾಹನ ಚಾಲಕನಾಗಿದ್ದ. ಕೆಲ ದಿನಗಳ ಹಿಂದೆ ಪತಿಗೆ ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೂಗೂರಿನಲ್ಲಿರುವ ಅಕ್ಕನ ಮನೆಗೆ ವಿಶ್ರಾಂತಿಗಾಗಿ ತಂಗಿ ಆ.15ರಂದು ಹೋಗಿದ್ದರು. ಈ ಮಧ್ಯೆ ಔಷಧಿ ತರುವಂತೆ ಅಕ್ಕ ಶಶಿಕಲಾಗೆ ತಂಗಿ ಚಂದ್ರಿಕಾ ಸೂಚಿಸಿ ಬೈಕಿನ ಕೀ ನೀಡಿದ್ದಳು. ಕೀ ಬಂಚ್ನಲ್ಲಿ ಮನೆಯ ಕೀ ಇತ್ತು. ಇದನ್ನ ಗಮನಿಸಿದ ಶಶಿಕಲಾ, ದ್ವಿಚಕ್ರವಾಹನದ ಮೂಲಕ ನೇರವಾಗಿ ಆಡುಗೋಡಿಯಲ್ಲಿರುವ ತಂಗಿ ಮನೆಗೆ ಬಂದಿದ್ದಳು. ಮಾರ್ಗ ಮಧ್ಯೆ ಈಕೆ ದೊಡ್ಡಮ್ಮನನ್ನ ಕರೆದುಕೊಂಡು ಬಂದಿದ್ದಳು. ತಂಗಿ ಮನೆಗೆ ಸುಮಾರು 100 ಮೀಟರ್ ದೂರವಿರುವಾಗ ದೊಡ್ಡಮ್ಮನನ್ನ ಇಳಿಸಿದ್ದಳು. ಬಳಿಕ ತಂಗಿಯ ಮನೆಯ ಬೀಗ ತೆಗೆದು ಒಳ ನುಗ್ಗಿದ್ದಾಳೆ. ಬೀರುವಿನ ಕೀ ಹುಡುಕಾಡಿದ್ದಾಳೆ. ಸಿಗದಿದ್ದಾಗ ಬೀರು ಹೊಡೆದು 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿ ಆಭರಣ ಕದ್ದಿದಾಳೆ. ಬಳಿಕ ಆ.20ರಂದು ಮನೆಗೆ ಬಂದು ತಂಗಿ ಚಂದ್ರಿಕಾ ನೋಡಿದಾಗ ಕಳ್ಳತನವಾಗಿದೆ ಎಂದು ಭಾವಿಸಿ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡು ಚಂದ್ರಿಕಾ ಅವರ ಮನೆ ಸುತ್ತಮುತ್ತ ಅಳವಡಿಸಿದ್ದ ಸಿಸಿಟಿವಿಯಲ್ಲಿ ಅಕ್ಕ ಬಂದು ಹೋಗಿರುವ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಕಳ್ಳತನ ಕೃತ್ಯದ ಬಗ್ಗೆ ನಿರಾಕರಿಸಿದ್ದಳು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ತೀವ್ರವಾಗಿ ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ: ಆರೋಪಿಗಳ ಹೆಸರು ಬಹಿರಂಗಪಡಿಸಲ್ಲ ಎಂದ ಕಮಿಷನರ್ - Theft Case