ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಅಣ್ಣನೇ ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಷ್ಮೀ ಲೇಔಟ್ ನಿವಾಸಿ ಪ್ರಕಾಶ್(19) ಹತ್ಯೆಯಾದ ವ್ಯಕ್ತಿ. ಈತನ ಅಣ್ಣ ರಜನಿ(23) ಆರೋಪಿಯಾಗಿದ್ದು, ಬಂಧಿಸಲಾಗಿದೆ.
ಸಹೋದರರಿಬ್ಬರು ಕಾರು ಮತ್ತು ದ್ವಿಚಕ್ರ ವಾಹನಗಳ ಮೆಕಾನಿಕ್‌ಗಳಾಗಿದ್ದರು. ಈ ಮಧ್ಯೆ ರಜನಿ ಕೆಲ ದುಶ್ಚಟಗಳ ದಾಸನಾಗಿದ್ದ, ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲೇ ಇರುತ್ತಿದ್ದ. ಹೀಗಿರುವಾಗ ಗುರುವಾರ ಮಧ್ಯಾಹ್ನ ಮನೆಗೆ ಬಂದ ಪ್ರಕಾಶ್ ರಜನಿಯನ್ನು ಕಂಡು 'ಬಹಳ ದಿನಗಳಿಂದ ಮನೆಯಲ್ಲೇ ಕೂಳಿತುಕೊಂಡಿರುವೆ. ಯಾವುದೇ ಕೆಲಸಕ್ಕೂ ಹೋಗುವುದಿಲ್ಲ. ತಂದೆ-ತಾಯಿ ಮತ್ತು ನಾನು ಮಾತ್ರ ದುಡಿಯಬೇಕೆ? ಎಂದು ಪ್ರಶ್ನಿಸಿ ಜಗಳ ಆರಂಭಿಸಿದ್ದಾನೆ. ಈ ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ರಜನಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತಮ್ಮನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಚಾಕು ಪ್ರಕಾಶ್‌ನ ಎದೆಗೆ ಚುಚ್ಚಿದೆ.
ಕೂಡಲೇ ಸ್ಥಳೀಯರು ಸಹೋದರರ ಜಗಳ ಬಿಡಿಸಿ ಪ್ರಕಾಶ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಪ್ರಕಾಶ್ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆ ವಿಚಾರ ತಿಳಿದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಆರೋಪಿ ರಜನಿಯನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಪ್ರಕಾಶ್‌ನ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಬೇಗೂರು ಠಾಣೆಯಲ್ಲಿ ದಾಖಲಾಗಿದೆ.
ಏಕಾಏಕಿ ಕಲ್ಲಿನಿಂದ ಮಹಿಳೆ ಮೇಲೆ ಹಲ್ಲೆ: ಮತ್ತೊಂದು ಪ್ರಕರಣದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಕೊಡಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಹಕಾರನಗರ ನಿವಾಸಿ ಸುನೀತಾ(43) ಗಾಯಗೊಂಡವರು. ಸುನಿತಾ ತಲೆಗೆ ಗಂಭೀರ ಗಾಯವಾಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೃತ್ಯ ಎಸಗಿದ ಮಹಾರಾಷ್ಟ್ರ ಮೂಲದ ಗೋಪಾಲ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆಂಧ್ರಪ್ರದೇಶದ ಕಡಪ ಮೂಲದ ಸುನೀತಾ ಸುಮಾರು 12 ವರ್ಷಗಳಿಂದ ಪತಿ ಮತ್ತು ಮಕ್ಕಳ ಜತೆ ಸಹಕಾರ ನಗರದಲ್ಲಿ ವಾಸವಾಗಿದ್ದರು. ಸುನೀತಾ ಪತಿ 3-4 ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರು ಮಕ್ಕಳ ಜತೆ ಸುನೀತಾ ಇಲ್ಲಿಯೇ ಇದ್ದಾರೆ.
ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸುನೀತಾ, ತಮ್ಮ ಇಬ್ಬರು ಮಕ್ಕಳನ್ನು ಸಹಕಾರನಗರದಲ್ಲಿರುವ ಸ್ಫೋರ್ಟ್ಸ್ ಸೆಂಟರ್‌ಗೆ ಬಿಟ್ಟು ಒಬ್ಬರೆ ಮನೆಗೆ ಹೋಗುತ್ತಿದ್ದರು. ಇದೇ ಸಂದರ್ಭ ಬ್ಯಾಂಕ್‌ವೊಂದರ ಸಮೀಪ ನಿಂತಿದ್ದ ಆರೋಪಿ ಗೋಪಾಲ್ ಏಕಾಏಕಿ ಕಲ್ಲಿನಿಂದ ಮಹಿಳೆಯ ತಲೆಗೆ ಹತ್ತಾರು ಬಾರಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಸುನೀತಾ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಕೆಳಗೆ ಬಿದ್ದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವೇಳೆ ಬ್ಯಾಂಕ್ ಸಮೀಪದ ಟೀ ಅಂಗಡಿಯಲ್ಲಿ ನಿಂತಿದ್ದ ಸಂತೋಷ್ ಎಂಬವವರು ಸ್ಥಳೀಯರ ನೆರವು ಪಡೆದು ಆರೋಪಿ ಗೋಪಾಲ್‌ನನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿ, ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಸದ್ಯ ಆರೋಪಿ ವಿಚಾರಣೆಗೆ ಸಹಕಾರ ನೀಡದೆ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಆತನ ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.