ಬೆಳಗಾವಿ: "ಮಹಾರಾಷ್ಟ್ರದ ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಪರಿಶೀಲನೆ ನಡೆಸಲು ನಾನು ಅಥವಾ ಶಿಕ್ಷಣ ಇಲಾಖೆಯ ಆಯುಕ್ತರು ಭೇಟಿ ನೀಡುತ್ತೇವೆ" ಎಂದು ಶಾಲಾ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಅವರು ಬೆಳಗಾವಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, "ನಮ್ಮ ಸರ್ಕಾರ ಹಾಗೂ ನನ್ನ ಇಲಾಖೆಯು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿದೆ. ವಿಶೇಷವಾಗಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಲೋಪಗಳನ್ನು ಸರಿಪಡಿಸಲು ನಾನು ಕಾರ್ಯಪ್ರವೃತ್ತನಾಗಿದ್ದೇನೆ. ಈ ವಿಚಾರವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ" ಎಂದು ತಿಳಿಸಿದರು.
"ಮಹಾರಾಷ್ಟ್ರದ ಗಡಿ ಕನ್ನಡ ಶಾಲೆಗಳ ಸುಧಾರಣೆಗೆ ನಾನು ಬದ್ಧನಾಗಿದ್ದೇನೆ. ಅಲ್ಲದೆ ಈ ಶಾಲೆಗಳ ಕುರಿತು ವಿಶೇಷ ಆಸಕ್ತಿ ವಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಕುರಿತು ಬಿಜೆಪಿಯ ಆರೋಪ ವಿಚಾರವಾಗಿ ಮಾತನಾಡಿ, "ನಮ್ಮ ಇಲಾಖೆಯಿಂದ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಬಿಜೆಪಿಯವರು ಆರೋಪಿಸಿದಂತೆ ನಾನು ಇಲಾಖೆಯ ಆಡಳಿತದಲ್ಲಿ ವಿಫಲವಾಗಿಲ್ಲ. ಅವರು ತಮ್ಮ ಮಕ್ಕಳನ್ನು ಮೊದಲು ಸರ್ಕಾರಿ ಶಾಲೆಗೆ ಕಳುಹಿಸಲಿ ಆಗ ಶಿಕ್ಷಣದ ಗುಣಮಟ್ಟ ಅವರಿಗೆ ತಿಳಿಯುತ್ತದೆ" ಎಂದು ತಿರುಗೇಟು ನೀಡಿದರು.
"ರಾಜ್ಯದ ವಿವಿಧ ಭಾಗಗಳಲ್ಲಿ 46,000 ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಬೇರೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಶಾಲೆಗಳನ್ನು ನಾವು ಮುಚ್ಚುತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.
"ಈಗಾಗಲೇ ರಾಜ್ಯಾದ್ಯಂತ ಒಟ್ಟು 13,000 ಶಿಕ್ಷಕರ ನೇಮಕಾತಿ ನಡೆದಿದೆ. ಇದಕ್ಕೂ ಮುನ್ನ ರಾಜ್ಯದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇತ್ತು. ಆದರೆ ಈಗ ಆ ಸಮಸ್ಯೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ" ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರೇ ನೇಮಕ ಆಗಬೇಕು. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿ ಪಡೆದು ಕ್ರಮ ವಹಿಸುತ್ತೇವೆ" ಎಂದು ಮಧು ಬಂಗಾರಪ್ಪ ತಿಳಿಸಿದರು.
"ಈ ಬಾರಿಯ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಅಭಿವೃದ್ಧಿಯ ಕುರಿತು ಚರ್ಚೆಗೆ ಬರಲಿ. ನಮ್ಮ ಸರ್ಕಾರವನ್ನು ವಿರೋಧಿಸುವುದು ಅವರ ಸಹಜತೆಯಾಗಿದೆ. ನಮ್ಮ ಸರ್ಕಾರ ಅಭಿವೃದ್ಧಿಯ ಪರವಾಗಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರವಾಗಿದೆ" ಸಮರ್ಥಿಸಿಕೊಂಡರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಹಾಮೇಳಾವ್ಗೆ ಮುಂದಾದ ಎಂಇಎಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ