ಮೈಸೂರು: ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ. ಹಣ ಅನಾವಶ್ಯಕವಾಗಿ ಇಲಾಖೆಗಳಲ್ಲಿ ಸೋರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ತ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್ಟಾಬ್ಲಿಷ್ಮೆಂಟ್ಗೆ 50%, ಡೆವೆಲಪ್ಮೆಂಟ್ಗೆ 50% ಅನುದಾನ ಮೀಸಲೀಡಬೇಕು. ಆದರೆ ಇಲಾಖೆಗಳಲ್ಲಿ ಹಣ ದಿಕ್ಕಾಪಾಲಾಗಿ ಪೋಲಾಗುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರದ ಆರ್ಥಿಕ ನೀತಿ ದುರ್ಬಲವಾಗಿದೆ. ವಿವೇಚನಾರಹಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಬಿಟ್ಟರೆ ಬೇರಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಸರ್ಕಾರ ಗ್ಯಾರೆಂಟಿ ಯೋಜನೆಗೆ ಎಷ್ಟು ಹಣ ಖರ್ಚಾಗುತ್ತಿದೆ, ಅಭಿವೃದ್ಧಿ ಕಾರ್ಯಗಳಿಗೆ ಎಷ್ಟು ಖರ್ಚು ಆಗುತ್ತಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.
ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯೆ: ಕರ್ನಾಟಕ ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಕ್ಕೆ ಹೆಸರಾದ ನಾಡು. ಕಲಾವಿದರಿಗೆ ಡಾ.ರಾಜ್ ಕುಮಾರ್ ಅನುಕರಣೀಯ. ಅವರನ್ನು ನೋಡಿ ಕಲಿಯಲಿಲ್ಲ ಎಂದರೆ ಹೇಗೆ?. ನಾನು ನಟ ದರ್ಶನ್ ಬಂಧನ ವಿಚಾರದಲ್ಲಿ ಮಾತನಾಡುವುದಿಲ್ಲ. ಅವರು 2014ರ ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿದ್ದರು ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಯಾವುದೇ ಹುದ್ದೆಗಳು ಭರ್ತಿಯಾಗಿಲ್ಲ: ರಾಜ್ಯ ಸರ್ಕಾರದ ವತಿಯಿಂದ ಯಾವುದೇ ಹುದ್ದೆಗಳೂ ಭರ್ತಿಯಾಗಿಲ್ಲ. ಖಾಲಿ ಹುದ್ದೆಗಳನ್ನು ತುಂಬುವ ಬದಲು ಹೊರ ಗುತ್ತಿಗೆ ಆಧಾರದ ಮೇಲೆ ಸಂಬಳ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ಇದರ ಟೆಂಡರ್ ಅನ್ನು ಮಂತ್ರಿಗಳು, ರಾಜಕಾರಣಿಗಳ ಮಕ್ಕಳಿಗೆ ಕೊಟ್ಟಿದ್ದಾರೆ. ಲೇಬರ್ ಆ್ಯಕ್ಟ್ ಪ್ರಕಾರ 18000 ಸಂಬಳ ನೀಡಬೇಕು. ಆದರೆ ಗುತ್ತಿಗೆದಾರರು 12,000 ನೀಡಿ 6000 ರೂಪಾಯಿ ಲೂಟಿ ಹೊಡೆಯುತ್ತಾರೆ. ಇದರಲ್ಲೂ ಸರ್ಕಾರ ಲೂಟಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಎಸ್ಪಿಪಿ ಬದಲಾವಣೆಗೆ ಒತ್ತಡವಿಲ್ಲ, ಒತ್ತಡ ಹಾಕಿದರೆ ಕೇಳುವುದಿಲ್ಲ- ಸಿಎಂ - CM Siddaramaiah