ಮೈಸೂರು: ದಕ್ಷಿಣ ಶಿಕ್ಷಕ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಇ.ಸಿ. ನಿಂಗರಾಜೇಗೌಡ ಬಿ.ಫಾರಂ ಇಲ್ಲದೇ ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಅನುಪಸ್ಥಿತಿಯಲ್ಲಿ ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಇಂದು ದಿನ ಚೆನ್ನಾಗಿದೆ ಎಂದು ಬಿ.ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಬೆಳಗ್ಗೆ 11 ಗಂಟೆಗೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರೊಂದಿಗೆ ಬಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ. ಇಂದು ಸಂಜೆ ಬೆಂಗಳೂರಿಗೆ ಹೋಗುತ್ತಿದ್ದೇನೆ, ಬಿ.ಫಾರಂ ಸಿಗಲಿದೆ. ನಾನು ಬಿಜೆಪಿ ಮತ್ತು ಜೆಡಿಎಸ್ನ ಎನ್ಡಿಎ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಬಿ.ಫಾರಂನೊಂದಿಗೆ ಬಂದು ನಾಮಪತ್ರ ಮತ್ತೊಮ್ಮೆ ಸಲ್ಲಿಸುತ್ತೇನೆ ಎಂದರು.
ನನಗೆ ಶನಿವಾರವೇ ಟಿಕೆಟ್ ಘೋಷಣೆಯಾಗಿದೆ. ಈಗ ಬೆಂಗಳೂರಿನ ಬಿಜೆಪಿ ಕಚೇರಿಗೆ ಬರುವಂತೆ ಕರೆದಿದ್ದಾರೆ. ಅಲ್ಲಿ ಸಭೆ ನಡೆಸಿ ನಾಮಪತ್ರ ಸಲ್ಲಿಸಲು ಯಾರ್‍ಯಾರು ಜೊತೆಗೆ ಇರುತ್ತಾರೆ ಎಂಬುದು ನಿರ್ಧಾರ ಆಗುತ್ತದೆ. ಬಿಜೆಪಿಯಲ್ಲಿ ಒಮ್ಮೆ ಅಭ್ಯರ್ಥಿ ಘೋಷಣೆ ಮಾಡಿದರೆ ಮುಗಿಯಿತು. ಬದಲಾಯಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ 10 ಜನ ಆಕಾಂಕ್ಷಿಗಳಿದ್ದೆವು, ನನ್ನ ಹೆಸರು ಘೋಷಣೆಯಾದ ಬಳಿಕ 9 ಜನ ನನ್ನೊಂದಿಗೆ ಇದ್ದಾರೆ. ನಾವು ಚುನಾವಣಾ ಪ್ರಚಾರವನ್ನು ಶುರು ಮಾಡಿದ್ದೇವೆ. ಜೆಡಿಎಸ್ನಲ್ಲಿ ವಿವೇಕಾನಂದ ಅವರಿಗೆ ಬಿ.ಫಾರಂ ನೀಡಿರುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್ ಟಿಕೆಟ್ಗೆ ಕೆ.ಟಿ.ಶ್ರೀಕಂಠೇಗೌಡ ಪಟ್ಟು - K T Srikantegowda