ದಾವಣಗೆರೆ: ನಗರದ ಅಧಿದೇವತೆ ದುಗ್ಗಮ್ಮ ಜಾತ್ರೆ ಮಂಗಳವಾರದಿಂದ ಶುರುವಾಗಿದೆ. ಎರಡು ದಿನಗಳ ಕಾಲ ಜರಗುವ ಈ ಜಾತ್ರೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. 1934ರಲ್ಲಿ ಸರಳವಾಗಿ ಆರಂಭವಾದ ಐತಿಹಾಸಿಕ ಜಾತ್ರೆ ಬಳಿಕ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ.
ಇಷ್ಟಾರ್ಥಗಳನ್ನು ಈಡೇರಿಸುತ್ತಾ ಭಕ್ತರನ್ನು ಕಾಯುತ್ತಿರುವ ದುಗ್ಗಮ್ಮ ದೇವಿ ದುಗ್ಗವತಿಯಿಂದ ದಾವಣಗೆರೆಗೆ ಬರಲು ಒಬ್ಬ ಮುಸ್ಲಿಂ ಬಳೆ ಮಾರಾಟಗಾರ ಕಾರಣವೆಂಬ ಇತಿಹಾಸವನ್ನು ಇಲ್ಲಿನ ಧರ್ಮದರ್ಶಿ ಚನ್ನಬಸಪ್ಪ ಹೇಳಿದ್ದಾರೆ. ದುಗ್ಗಮ್ಮ ತನ್ನ ಭಕ್ತರನ್ನು ಕಾಯಬೇಕೆಂದೇ ಹರಪನಹಳ್ಳಿ ತಾಲೂಕಿನ ದುಗ್ಗಾವತಿಯಿಂದ ದಾವಣಗೆರೆಗೆ ಬಂದಿರುವ ಅಧಿದೇವತೆ ಎಂಬುದು ಭಕ್ತರ ನಂಬಿಕೆ.
1934ರಿಂದ ಆರಂಭವಾದ ಈ ಸರಳ ಜಾತ್ರೆ ಇದೀಗ ವಿಜೃಂಭಣೆಯಿಂದ ಜರುಗುತ್ತಿದೆ. ಎರಡು ದಿನಗಳ ಐತಿಹಾಸಿಕ ಜಾತ್ರೆಗೆ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ನಿರುದ್ಯೋಗ, ಮಕ್ಕಳ ಸಮಸ್ಯೆ, ಕೋರ್ಟ್ ಕೇಸ್ ಮುಂತಾದ ಅನೇಕ ಸಮಸ್ಯೆಗಳ ನಿವಾರಣೆಗೆ ಹರಕೆ ಹೊತ್ತರೆ ದೇವಿ ಈಡೇರಿಸುತ್ತಾಳೆ ಎನ್ನುತ್ತಾರೆ ಕ್ಷೇತ್ರದ ಭಕ್ತರು.
ದೇವಾಲಯದ ಧರ್ಮದರ್ಶಿಗಳಾದ ಚನ್ನಬಸಪ್ಪ ಹೇಳುವ ಪ್ರಕಾರ, 1934ರಲ್ಲಿ ದಾವಣಗೆರೆ ಹಳೆಪೇಟೆಯ ಮುಸ್ಲಿಂ ಬಳೆ ವ್ಯಾಪಾರಿ ವ್ಯಾಪಾರಕ್ಕೆಂದು ದುಗ್ಗವತಿಗೆ ಹೋಗಿದ್ದಾಗ ಅಂದು ಯಾರೂ ಬಳೆಯನ್ನು ಖರೀದಿ ಮಾಡಲಿಲ್ಲವಂತೆ. ವ್ಯಾಪಾರವಾಗದೇ ನೊಂದ ಬಳೆಗಾರ ದೇವಾಲಯದಲ್ಲಿ ಮಲಗಿದ್ದಾಗ, ಕನಸಿನಲ್ಲಿ ಬಂದ ದುಗ್ಗಮ್ಮ ದೇವಿ "ಬಳೆಗಾರ ಸಾಬಣ್ಣ, ನಾಳೆ ಐದು ಬಳೆಗಳನ್ನು ತನ್ನ ಸನ್ನಿಧಿಯಲ್ಲಿಟ್ಟು ದರ್ಶನ ಪಡೆದು ಮಾರಾಟಕ್ಕೆ ತೆರಳು, ನಿನ್ನ ಎಲ್ಲಾ ಬಳೆಗಳು ಮಾರಾಟ ಆಗುತ್ತವೆ" ಎಂದು ಆಶೀರ್ವಾದ ಮಾಡಿದ್ದಳಂತೆ.
ಅಂದು ದೇವಿ ಹೇಳಿದಂತೆ ಬಳೆಗಾರ ದೇವಿಯ ದರ್ಶನ ಪಡೆದು ಐದು ಬಳೆಯನ್ನಿಟ್ಟು ಮಾರಾಟಕ್ಕೆ ತೆರಳಿದ್ದನಂತೆ. ಆ ದಿನ ಸಂಜೆಯ ವೇಳೆ ಎಲ್ಲಾ ಬಳೆಗಳೂ ಮಾರಾಟವಾಗಿದ್ದವಂತೆ. ತನ್ನಲ್ಲಿದ್ದ ಎಲ್ಲಾ ಬಳೆಗಳು ಖಾಲಿಯಾದಾಗ ಕೊಡಲು ಹಣವಿಲ್ಲದೆ ಆತ ಸಂಜೆಯ ಹೊತ್ತಿಗೆ ದುಡ್ಡು ಕೊಡುವ ಬದಲು ಕಾಳು ಕಡಿ ಕೊಡುವ ನಿರ್ಧಾರ ಮಾಡಿದ್ದನಂತೆ.
ಆದರೆ ದುಗ್ಗವತಿಯಿಂದ ಕಡಲೆ ಕಾಳು ತುಂಬಿರುವ ವಾಹನದೊಂದಿಗೆ ವ್ಯಾಪಾರಿ ಬರುವ ವೇಳೆಗೆ ಬಂಡಿ ಏರುಪೇರಾಗಿ ಅಲ್ಲೇ ದೇವಿಯ ರೂಪದಲ್ಲಿದ್ದ ಒಂದು ದುಂಡು ಕಲ್ಲನ್ನು ತಂದು ಗಾಡಿಯಲ್ಲಿಟ್ಟು ದಾವಣಗೆರೆ ತಲುಪಿದನಂತೆ. ಆ ಸಂದರ್ಭದಲ್ಲಿ ವಾಹನದ ಅಚ್ಚು ಮುರಿದು ಬಿದ್ದಿತ್ತಂತೆ. ಅಲ್ಲೇ ಇದ್ದ 3 ರಿಂದ ಪುಟ್ಟ ಬಾಲಕಿಯೊಬ್ಬಳಿಂದ, ನಾನು ದುಗ್ಗವತಿ ದುಗ್ಗಮ್ಮ. ನನಗೆ ಸಂತೃಪ್ತಿಯಾಗಿದೆ. ನಾನು ಇಲ್ಲೇ ನೆಲೆಸುತ್ತೇನೆ. ಇಡೀ ಜಿಲ್ಲೆಗೆ ತೊಂದರೆ ಆಗದಂತೆ ನೋಡಿಕೊಳ್ಳುವೆ ಎಂದು ಹೇಳಿ ಗುಡಿ ಕಟ್ಟುವ ಏರ್ಪಾಡು ಮಾಡಿ ಎಂದು ಹಿರಿಯರಿಗೆ ವ್ಯಾಖ್ಯಾನವನ್ನು ದೇವಿ ಮಾಡಿದ್ದಳು. ಬಳಿಕ ಆ ಮುಸ್ಲಿಂ ವ್ಯಕ್ತಿ ತಂದಿದ್ದ ದೇವಿಯ ರೂಪದ ಗುಂಡು ಕಲ್ಲನ್ನು ಇದೇ ದೇವಾಲಯದಲ್ಲಿ ಅಂದಿನ ಯಜಮಾನರು ಪ್ರತಿಷ್ಠಾಪಿಸಿದರು. ಬಳಿಕ ಗುಡಿ ಕಟ್ಟಿದಾಗಿನಿಂದ ಇಲ್ಲಿ ಎರಡು ವರ್ಷಕ್ಕೊಮ್ಮೆ ಜಾತ್ರೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಧರ್ಮದರ್ಶಿ ಚನ್ನಬಸಪ್ಪ ಮಾಹಿತಿ ನೀಡಿದರು.
ಇದನ್ನೂ ಓದಿ: ಹಾವೇರಿ: ಅದ್ಧೂರಿಯಾಗಿ ನಡೆದ ಶಿಶುನಾಳ ಶರೀಫ, ಗುರು ಗೋವಿಂದ ಭಟ್ ಜಾತ್ರಾ ರಥೋತ್ಸವ