ರಾಯಚೂರು: ಲಾರಿಯಲ್ಲಿ ಹಿಟಾಚಿಯನ್ನು ತೆಗೆದುಕೊಂಡು ಹೋಗುತ್ತಿರುವ ವೇಳೆ ಹಿಟಾಚಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಚಾಲಕ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಇಂದು ನಡೆದಿದೆ. ಮಾನವಿ ತಾಲೂಕಿನ ಯಡವಾಳಿ ಗ್ರಾಮದ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಜಾರ್ಖಂಡ್ ಮೂಲದ ಅಜಯ್ ಕುಮಾರ್ (35) ಮೃತ ಚಾಲಕನೆಂದು ಗುರುತಿಸಲಾಗಿದೆ.
ವಿದ್ಯುತ್ ತಂತಿ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿ ಲಾರಿ ಬೆಂಕಿಯಿಂದ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮೃತನ ಶವವನ್ನು ಮಾನವಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಪೈಪ್‌ಲೈನ್ ಕೆಲಸಕ್ಕಾಗಿ ಹಿಟಾಚಿಯನ್ನು ತರಿಸಲಾಗಿತ್ತು. ಹಿಟಾಚಿಯನ್ನು ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ಹೈಟೆನ್ಷನ್ ವಿದ್ಯುತ್ ವೈರ್ ತಾಕುತ್ತದೆ ಎಂದು ಚಾಲಕ ಕಟ್ಟಿಗೆಯಿಂದ ಹೈಟೆನ್ಷನ್ ವೈರ್ ಎತ್ತಲು ಹೋಗಿದ್ದಾನೆ. ಈ ವೇಳೆ ಕಟ್ಟಿಗೆ ಕೈಯಿಂದ ಜಾರಿ ಬಿದ್ದು, ವಿದ್ಯುತ್ ವೈರ್ ಹಿಟಾಚಿಗೆ ತಗುಲಿದೆ. ಪರಿಣಾಮ ಚಾಲಕ ಮೃತಪಟ್ಟಿದ್ದು, ಲಾರಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವೈರ್ ತಾಕಿದ್ದರಿಂದ ಬೆಂಕಿಯಿಂದ ಲಾರಿ ಹೊತ್ತಿ ಉರಿದಿದೆ. ಬಳಿಕ ವಿಷಯ ತಿಳಿದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆ ಕುರಿತು ಮೃತ ಚಾಲಕನ ಕುಟಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾನವಿ ಪೊಲೀಸರು ತಿಳಿಸಿದ್ದಾರೆ. ಮಾನವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ: ಬಂಟ್ವಾಳ: ಸಂಚರಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಬಿದ್ದು ಯುವತಿ ಸಾವು!