ಬೆಂಗಳೂರು: ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯ ಹೆಸರಲ್ಲಿ ಮಹಿಳೆಯೊಬ್ಬರನ್ನು ತಡೆದು ಆನ್‌ಲೈನ್ ಮೂಲಕ ಹಣ ಸ್ವೀಕರಿಸಿದ ಆರೋಪ ಜೀವನ್ ಭೀಮಾನಗರ ಸಂಚಾರಿ ಪೊಲೀಸರ ವಿರುದ್ಧ ಕೇಳಿ ಬಂದಿದೆ. ತಪಾಸಣೆ ಮಾಡದೇ ಸಂಚಾರಿ ನಿಯಮ ಉಲ್ಲಂಘನೆ ಎಂದು ಹೇಳಿ ಗೂಗಲ್ ಪೇ ಮೂಲಕ 5 ಸಾವಿರ ರೂಪಾಯಿ ಪಡೆದಿದ್ದಾರೆ ಎಂದು ಕೋಶಿ ವರ್ಗೀಸ್ ಎಂಬವರು ಎಕ್ಸ್ ಆ್ಯಪ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ತಮ್ಮ ಮಗಳನ್ನು ಹಳೆ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿ ಪೊಲೀಸರು ತಡೆದಿದ್ದರು. ಈ ಸಂದರ್ಭದಲ್ಲಿ ತಪಾಸಣೆ ಮಾಡದೇ ಡ್ರಿಂಕ್ ಆ್ಯಂಡ್ ಡ್ರೈವ್ ಆರೋಪ ಮಾಡಿ ಮೊದಲಿಗೆ 15 ಸಾವಿರ ರೂ.ಗೆ ಬೇಡಿಕೆ ಇಟ್ಟರು. ನಂತರ ಗೂಗಲ್ ಪೇ ಮೂಲಕ ತಮ್ಮ ಫೋನ್ ನಂಬರ್ಗೆ 5 ಸಾವಿರ ರೂ ಹಾಕಿಸಿಕೊಂಡರು. ಈ ವೇಳೆ ಪೊಲೀಸ್ ಸಿಬ್ಬಂದಿ ಬಾಡಿ ಕ್ಯಾಮ್ ಕಣ್ತಪ್ಪಿಸಿ ಹಣ ಪಡೆದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.
ಇದಕ್ಕೆ ಎಕ್ಸ್ ಆ್ಯಪ್ ಮೂಲಕವೇ ಪ್ರತಿಕ್ರಿಯಿಸಿರುವ ಜೀವನ್ ಭೀಮಾ ನಗರ ಸಂಚಾರಿ ಠಾಣಾ ಪೊಲೀಸರು, ಹಣ ಸ್ವೀಕರಿಸಿರುವ ಗೂಗಲ್ ಪೇ ನಂಬರ್ ಹಂಚಿಕೊಳ್ಳುವಂತೆ ಕೋರಿದ್ದಾರೆ.
ಇದನ್ನೂ ಓದಿ: ಪದೇ ಪದೆ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ: ವಾಹನ ನಾಶಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ