ರಾಮನಗರ: ಬೊಂಬೆನಗರಿ ಚನ್ನಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಡಾ.ಸಿ.ಎನ್.ಮಂಜುನಾಥ್ ಇಂದು ಬಿರುಸಿನ ಪ್ರಚಾರ ನಡೆಸಿದರು. ಚನ್ನಪಟ್ಟಣ ತಾಲೂಕಿನ ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜತೆಗಿದ್ದರು. ಇಂದಿನಿಂದ ಹಳ್ಳಿ ಹಳ್ಳಿ ಪ್ರಚಾರ ಕೈಗೊಂಡಿರುವ ಡಾ.ಮಂಜುನಾಥ್, ಮಳೂರು, ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಹಾಗೂ ಚನ್ನಪಟ್ಟಣ ನಗರದಲ್ಲಿ ಮತಬೇಟೆ ನಡೆಸಿದರು.
ಚನ್ನಪಟ್ಟಣ ತಾಲೂಕಿನ ಮುದಿಗೆರೆ, ಮತ್ತಿಕೆರೆ, ಭೈರಾಪಟ್ಟಣ, ಚಕ್ಕೆರೆ, ಮಳೂರು ಪಟ್ಟಣ, ಕೂಡ್ಲೂರು ಗ್ರಾಮ ಸೇರಿ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಮತ ಪ್ರಚಾರ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಿ.ಎನ್.ಮಂಜುನಾಥ್, ಮೈತ್ರಿ ಕಾರ್ಯಕರ್ತರ ಮೇಲಿನ ಹಲ್ಲೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದು ಸಂಸ್ಕೃತಿ ಅಲ್ಲ. ಹೆದರಿಸೋದು ಸರಿಯಲ್ಲ. ಚುನಾವಣೆಯನ್ನು ಆರೋಗ್ಯಕರವಾಗಿ ಎದುರಿಸಬೇಕೇ ಹೊರತು ಅಡ್ಡದಾರಿಯಿಂದಲ್ಲ. ಘಟನೆ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೂ ತರುತ್ತೇವೆ. ಚುನಾವಣೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ ಅಂತಾ ಅವರಿಗೆ ಗೊತ್ತಾಗಿರಬೇಕು. ಈ ಸಂಬಂಧ ಡಿಜಿ ಮತ್ತು ಐಜಿಪಿ ಜತೆಗೂ ಮಾತನಾಡುತ್ತೇನೆ ಎಂದರು.
ಮೈತ್ರಿ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಎಲ್ಲೆಡೆ ಹೊಸ ಹುರುಪು ಕಾಣಿಸುತ್ತಿದೆ. ಜನರು ಉತ್ಸಾಹದಿಂದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ವೈದ್ಯಕೀಯ ಸೇವೆಯನ್ನು ಜನ ನೆನೆಸಿಕೊಳ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ. ಸಿ.ಎನ್.ಮಂಜುನಾಥ್ ಈ ಭಾಗದಲ್ಲಿ ಸಂಸದರಾದ್ರೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ. ಹಾಗಾಗಿ ಜನ ಅವರನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.