ಬೆಂಗಳೂರು: ಸ್ವಾಮೀಜಿ, ಮಠದ ಬಗ್ಗೆ ಅಗೌರವದಿಂದ ಮಾತನಾಡಬಾರದು. ಈ ಬಗ್ಗೆ ಎಚ್ಚರಿಕೆ ಇರಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಇಂದು ಮಾತನಾಡಿದ ಅವರು, ಸ್ವಾಮೀಜಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಡಿಕೆಶಿ ಕಷ್ಟದಲ್ಲಿದ್ದಾಗ ಸ್ವಾಮೀಜಿ ಅವರ ಮನೆಗೆ ಹೋಗಿದ್ದರು. ಆ ಕರುಣೆ ಅವರಿಗೆ ಇರಬೇಕು. ಸ್ವಾಮೀಜಿಯಿಂದ ಡಿಕೆಶಿ ಸಹಾಯ ಪಡೆದಿದ್ದಾರೆ, ಆದರೆ ಸ್ವಾಮೀಜಿ ಯಾವುದೇ ಸಹಾಯ ಪಡೆದಿಲ್ಲ ಎಂದರು.
ಒಕ್ಕಲಿಗ ಸಿಎಂರನ್ನು ಬೀಳಿಸಿದ್ದು ಬಿಜೆಪಿಯವರು ಅಂತಾರೆ. ಆದರೆ ಯಾರು ಬೀಳಿಸಿದ್ದು ಅಂತ ಇಡೀ ಪ್ರಪಂಚಕ್ಕೆ ಗೊತ್ತು. ಎಂಎಲ್‌ಎಗಳು ಯಾವ ಪಕ್ಷದ ಬಂದಿದ್ದು? 14 ಶಾಸಕರು ಕಾಂಗ್ರೆಸ್ ಪಕ್ಷದಿಂದ ಬಂದವರು. ಮಂಡ್ಯದಲ್ಲಿ ಸುಮಲತಾರನ್ನು ಗೆಲ್ಲಿಸಿದ್ದು ನಾವೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ, ಸರ್ಕಾರ ಬೀಳಿಸಿದ್ದು ಯಾರು ಎಂದು ಮೊದಲು ಡಿಕೆಶಿ ಸಿದ್ದರಾಮಯ್ಯರನ್ನು ಕೇಳಲಿ ಎಂದು ತಿರುಗೇಟು ಕೊಟ್ಟರು.
ಬಿಡದಿ ಸಭೆಗೆ ಹೋಗಬೇಕಿತ್ತು. ಆದರೆ ಚುನಾವಣಾಧಿಕಾರಿಗಳು ಅಲ್ಲಿ ಕಾವಲು ಕಾಯುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಹೋಗಲು ಆಯೋಗದ ಅನುಮತಿ ಬೇಕು. ಯುಗಾದಿ ಹಬ್ಬಕ್ಕೆ ಬಿಡದಿ ಮನೆಗೆ ಊಟಕ್ಕೆ ಹೋದರೆ ಏಕೆ ಅನುಮತಿ ಬೇಕು? ಆ ರೀತಿ ಯಾವ ಕಾನೂನಿನಲ್ಲಿ ಇದೆ?. ಬಿಡದಿಯಲ್ಲಿ ನಡೆಯುವ ಸಭೆಯಿಂದ ಕಾಂಗ್ರೆಸ್ನವರಿಗೆ ತಲೆ ಕೆಟ್ಟುಹೋಗಿದೆ ಎಂದು ಟೀಕಿಸಿದರು.
2 ಸಾವಿರ ಕೋಟಿ ರೂ ಎಸ್ಡಿಆರ್ಎಫ್ ಹಣವನ್ನು ಕೇಂದ್ರ ಸರ್ಕಾರ ಎರಡು ಕಂತಲ್ಲಿ ಬಿಡುಗಡೆ ಮಾಡಿದೆ. ಅದನ್ನು ಸರ್ಕಾರ ಮುಚ್ಚಿಟ್ಟುಕೊಂಡಿದೆ. ಕೇಂದ್ರ ಕೊಟ್ಟ ಹಣದಿಂದ ರಾಜ್ಯ ಸರ್ಕಾರ ತಲಾ 2,000 ರೂ.ರೈತರಿಗೆ ಪರಿಹಾರ ನೀಡುತ್ತಿದೆ ಎಂದರು.
ರಾಜ್ಯ ಸರ್ಕಾರ ಹಣ ಇಲ್ಲದೆ ಪಾಪರ್ ಆಗಿದೆ. ರಾಜ್ಯದ ಆರ್ಥಿಕತೆಯ ಶ್ವೇತಪತ್ರ ಬಿಡುಗಡೆ ಮಾಡಲಿ. ಜನಕ್ಕೆ ಗೊತ್ತಾದರೆ ಮಾನ ಮರ್ಯಾದೆ ಹೋಗುತ್ತದೆ. ಇವರು ಡೂಪ್ಲಿಕೇಟ್ ಸಿದ್ದರಾಮಯ್ಯ. ಕೇಂದ್ರದ ಅಕ್ಕಿಯನ್ನು ನನ್ನ ಅನ್ನ ಭಾಗ್ಯ ಅಂತಾರೆ ಎಂದು ತಿಳಿಸಿದರು.
ಇದನ್ನೂಓದಿ: 'ಕುಮಾರಸ್ವಾಮಿ ಈಗ ಜನರಿಗೆ ಊಟ ಹಾಕುತ್ತಿದ್ದಾರೆ, ಕೋವಿಡ್ ಸಮಯದಲ್ಲಿ ಏನೂ ಮಾಡಲಿಲ್ಲ' - D K Shivakumar