ಹುಬ್ಬಳ್ಳಿ: ನೇಹಾ ಕೊಲೆಗಡುಕನಿಗೆ ಗಲ್ಲು ಶಿಕ್ಷೆಯಾಗಬೇಕು. ಕೊನೆಯವರೆಗೂ ಎಲ್ಲರೂ ನಿಲ್ಲಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು. ಕೊಲೆಗೀಡಾದ ನೇಹಾ ಮನೆಗೆ ಇಂದು ಭೇಟಿ ನೀಡಿ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಹಾಗೂ ತಾಯಿ ಗೀತಾ ಅವರಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದ ಅವರು, ಸ್ವಾರ್ಥಕ್ಕಾಗಿ ಆ ಹೆಣ್ಣು ಮಗಳಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದರು.
ನೇಹಾ ಸಹ ಹೆಣ್ಣು, ರುಕ್ಸಾನಾ ಕೂಡ ಹೆಣ್ಣು. ಹೆಣ್ಣು ಅಂದ್ರೆ ಹೆಣ್ಣು, ಜಾತಿ ರಾಜಕಾರಣ, ಧರ್ಮ ಸೇರಿದಂತೆ ಯಾವುದೂ ಮಧ್ಯೆ ತರಬೇಡಿ. ನೇಹಾಳಿಗೆ ನ್ಯಾಯ ಸಿಗಬೇಕು. ಹೆಣ್ಣುಮಕ್ಕಳ ಭದ್ರತೆ ಹಿನ್ನಲೆ ಪ್ರತಿ ಜಿಲ್ಲಾಧಿಕರಿಗಳಿಗೆ ಮಹಿಳಾ ಆಯೋಗದಿಂದ ನೋಟಿಸ್ ಕೊಡಲಾಗುವುದು. ನಾನು ಪ್ರತಿ ಜಿಲ್ಲಾಧಿಕಾರಿಗೆ ಸಂದೇಶ ರವಾನೆ ಮಾಡ್ತೀನಿ. ಜಿಲ್ಲಾಧಿಕಾರಿಗಳು ಪ್ರತಿಯೊಂದು ಕಾಲೇಜ್ ಭದ್ರತೆ ಮಾಹಿತಿ ಪಡೆಯಬೇಕು ಎಂದು ಸೂಚನೆ ನೀಡಲಾಗುವುದು ಎಂದರು.
ಮಹಿಳಾ ಆಯೋಗ ಇದೆ ಅನ್ನೋದು ಎಲ್ಲರಿಗೂ ಗೊತ್ತಾಗಬೇಕು. ಫ್ರೀ ಹೆಲ್ಪಲೈನ್ ಮಾಡಲು ಮುಖ್ಯಮಂತ್ರಿಗಳ ಜೊತೆ ಮಾತಾಡಿದ್ದೀನಿ. ನೇಹಾಳ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಅಕಸ್ಮಾತ್ ಬಳಸಿಕೊಂಡರೆ ನೇಹಾ ಜೀವ ಹೋದ ಹಾಗೆ ಕೊಲೆಯಾಗಿರುವ ಎಲ್ಲ ಹೆಣ್ಣು ಮಕ್ಕಳಿಗೆ ಮಾಡಿರುವ ಅಪಮಾನ. ಮುಖ್ಯಮಂತ್ರಿಗಳಾಗಲಿ, ಗೃಹಮಂತ್ರಿಗಳಾಗಲಿ, ಪೊಲೀಸರಾಗಲಿ ಸೂಕ್ಷ್ಮವಾಗಿ ವರ್ತನೆ ಮಾಡಬೇಕು. ಅವರ ಮನೆಯವರಿಗೆ ನೋವಾಗೋ ಹಾಗೆ ಯಾರೂ ಮಾತಾಡಬಾರದು ಎಂದು ಮಹಿಳಾ ಆಯೋಗದ ಅಧ್ಯಕ್ಷರು ಹೇಳಿದರು.
ನಿರ್ಭಯಾ ಘಟನೆ ಆದ ಮೇಲೆ ಕಾನೂನು ಕಠಿಣವಾಗಿದೆ. ಪೊಕ್ಸೋ ಕೇಸ್ನಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಹೇಗಿದೆಯೋ ಅದೇ ರೀತಿ ಈ ಕೇಸ್ನಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಆಗಬೇಕು. ಇಲ್ಲದಿದ್ದರೆ ಜನ ಮರೆತುಬಿಡ್ತಾರೆ. ಇಡೀ ದೇಶದಲ್ಲಿ ಪ್ರತಿ ಒಂದು ಗಂಟೆಯಲ್ಲಿ 73 ಹೆಣ್ಣು ಮಕ್ಕಳ ಕೊಲೆಯಾಗ್ತಿವೆ. ಅಶ್ವಿನಿ ಅನ್ನೋ ಹುಡುಗಿ ನನಗೆ ಕಾಲ್ ಮಾಡಿದ್ಲು. ಆಕೆಗೆ ಅಯೋಗದಿಂದ ನಾನು ನ್ಯಾಯ ಕೊಡಿಸಿದ್ದೇನೆ ಎಂದು ಮಹಿಳಾ ಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಹೇಳಿದರು.