ಬಾಗಲಕೋಟೆ: ವಕ್ರವಾಗಿದ್ದ ಬಾಲಕನ ಬೆನ್ನುಮೂಳೆಗೆ ಬಾಗಲಕೋಟೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬೀಳಗಿ ತಾಲೂಕಿನ ಯಳ್ಳಿಗುತ್ತಿ ಗ್ರಾಮದ ನಿವಾಸಿ ಅನ್ವರ್ ದಾದಾಪೀರ್ ಗಲಗಲಿ (15) ಎಂಬ ಬಾಲಕನ ಬೆನ್ನುಮೂಳೆ ಹುಟ್ಟುತ್ತಲೇ ವಕ್ರವಾಗಿತ್ತು. ಇದೀಗ ಗುಳೇದ ಆಸ್ಪತ್ರೆಯ ವೈದ್ಯರು ಸತತ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ.
ಸ್ಕೋಲಿಯೋಸಿಸ್ ಸಮಸ್ಯೆ ಎಂದು ಕರೆಯಲಾಗುವು ಈ ರೋಗಕ್ಕೆ ಸ್ಪೈನಲ್ ಡಿಫಾರ್ಮಿಟಿ ಕರೆಕ್ಷನ್ ಸರ್ಜರಿಯನ್ನು ನ್ಯೂರೋ ಮಾನಿಟರಿಂಗ್ ಯಂತ್ರದ ಸಹಾಯದೊಂದಿಗೆ ನೇರವೇರಿಸಲಾಗಿದೆ.
ಬೆಂಗಳೂರು ಸೇರಿದಂತೆ ಬೇರೆ ರಾಜ್ಯಗಳಲ್ಲಿ ಈ ಶಸ್ತ್ರಚಿಕಿತ್ಸೆಗೆ ಸುಮಾರು 8-10 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಆದರೆ ಈ ಬಾಲಕನಿಗೆ ಇತರ ಸಂಘ, ಸಂಸ್ಥೆಗಳ ಸಹಾಯದೊಂದಿಗೆ ಕೇವಲ ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸುಮಾರು 10ಕ್ಕೂ ಹೆಚ್ಚು ಸ್ಕ್ರೂಗಳನ್ನು ಹಾಕಿ ಡೊಂಕಾಗಿದ್ದ ಬೆನ್ನು ಮೂಳೆ ನೇರ ಮಾಡಲಾಗಿದೆ.
ಈ ಕುರಿತು ಡಾ.ಉದಯಕುಮಾರ ಗುಳೇದ ಮಾತನಾಡಿ, ''ಬಹಳ ವಿಶೇಷವಾದ ಸರ್ಜರಿಯನ್ನು ನಾವು ಹೋದ ವಾರ ಗುಳೇದ ಆಸ್ಪತ್ರೆಯಲ್ಲಿ ನೆರವೇರಿಸಿದ್ದೇವೆ. ಸ್ಕೋಲಿಯೋಸಿಸ್ ಸಮಸ್ಯೆ ಎಂದರೆ ಬೆನ್ನೆಲುವಿನ ವಕ್ರತೆ. ಭಾರತದಲ್ಲಿ ಸಾಕಷ್ಟು ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಆದರೆ ಬಹಳಷ್ಟು ಮಕ್ಕಳಲ್ಲಿ ತೀವ್ರವಾಗಿರಲ್ಲ, ಸಣ್ಣದಾಗಿರುತ್ತದೆ. ಕೆಲ ಮಕ್ಕಳಲ್ಲಿ ತೀವ್ರತೆ ಹೆಚ್ಚಾಗಿ ದೇಹ ವಕ್ರವಾಗಿ ಕಾಣಿಸಿಕೊಳ್ಳುತ್ತದೆ. ನೋಡುವುದಕ್ಕೆ ಅಸಹ್ಯಕರವಾಗಿರುತ್ತದೆ. ಈ ಸಮಸ್ಯೆಗೆ 20ನೇ ಶತಮಾನದವರೆಗೆ ಯಾವುದೇ ಚಿಕಿತ್ಸೆ ಇರಲಿಲ್ಲ. ಇಲ್ಲಿವರೆಗೂ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾದಂತಹ ನಗರಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಈಗ ನಾವು ನಡೆಸಿದ್ದೇವೆ'' ಎಂದರು.
ಶಸ್ತ್ರಚಿಕಿತ್ಸೆಯ ನಡೆಸಿದ ತಂಡದಲ್ಲಿ ಡಾ.ಕಾಡಪ್ಪ ಶೆಡ್ಯಾಳ, ಡಾ.ಅರ್ಜುನ, ಅರವಳಿಕೆ ತಜ್ಞ ಡಾ. ವಿಶ್ವನಾಥ ಭೈರ, ಡಾ.ಅರುಣಕುಮಾರ ಹಳ್ಳಿ ಹಾಗು ಆಸ್ಪತ್ರೆ ಸಿಬ್ಬಂದಿ ಇದ್ದರು.