ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಸಾಕ್ಷ್ಯಾಧಾರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಪೊಲೀಸರು, ನಟ ದರ್ಶನ್ ಸೇರಿದಂತೆ 9 ಮಂದಿ ಆರೋಪಿಗಳನ್ನು ಡಿಎನ್ಎ ಪರೀಕ್ಷೆಗೊಳಪಡಿಸುತ್ತಿದ್ದಾರೆ. ಇದಕ್ಕಾಗಿ ಆರೋಪಿಗಳನ್ನು ಇಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ದರ್ಶನ್, ಸ್ನೇಹಿತೆ ಪವಿತ್ರಾ ಗೌಡ, ಪವನ್, ರಾಘವೇಂದ್ರ, ವಿನಯ್ ಸೇರಿದಂತೆ ಎಲ್ಲ ಆರೋಪಿಗಳನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ರೇಣುಕಾಸ್ವಾಮಿ ಕೊಲೆಗೈದ ಪಟ್ಟಣಗೆರೆ ಶೆಡ್ನಲ್ಲಿ ರಕ್ತದ ಮಾದರಿ ಹಾಗೂ ಕೂದಲು ದೊರೆತಿದ್ದು, ಎಫ್ಎಸ್ಎಲ್ ಅಧಿಕಾರಿಗಳು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಸ್ಥಳದಲ್ಲಿದ್ದ ರಕ್ತದ ಮಾದರಿ ಹಾಗೂ ಕೂದಲು ಯಾರದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿಯಲು ಪೊಲೀಸರು ಡಿಎನ್ಎ ಪರೀಕ್ಷೆಯ ಮೊರೆ ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಆರೋಪಿಗಳ ರಕ್ತ ಹಾಗೂ ಕೂದಲಿನ ಮಾದರಿಯನ್ನು ವೈದ್ಯರು ಸಂಗ್ರಹಿಸಲಿದ್ದಾರೆ. ತದನಂತರ ಕೊಲೆ ನಡೆದ ಸ್ಥಳದಲ್ಲಿ ಸಿಕ್ಕಿದ ರಕ್ತ ಹಾಗೂ ಕೂದಲಿಗೂ ಹೋಲಿಕೆ ನಡೆಯಲಿದೆ. ಈ ತಪಾಸಣೆಯಲ್ಲಿ ಕೂದಲು ಆರೋಪಿಗಳದ್ದೇ ಎಂದು ದೃಢಪಟ್ಟರೆ ಮುಖ್ಯ ಸಾಕ್ಷ್ಯವನ್ನಾಗಿ ಪೊಲೀಸರು ಪರಿಗಣಿಸಲಿದ್ದಾರೆ.
ತಾಂತ್ರಿಕ ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳಿಗೆ ಹೆಚ್ಚು ಒತ್ತು ನೀಡಿರುವ ಪೊಲೀಸರು ಸಿಸಿಟಿವಿ ಕ್ಯಾಮರಾ, ಸಿಡಿಆರ್ ಕರೆ ಇನ್ನಿತರ ಸಾಕ್ಷ್ಯಾಧಾರಗಳನ್ನೂ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಎಸ್ಪಿಪಿ ಬದಲಾವಣೆಗೆ ಒತ್ತಡವಿಲ್ಲ, ಒತ್ತಡ ಹಾಕಿದರೆ ಕೇಳುವುದಿಲ್ಲ- ಸಿಎಂ - CM Siddaramaiah