ಬೆಂಗಳೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ. ಮಹದೇವಪ್ಪ ನೇತೃತ್ವದಲ್ಲಿ ಮೈಸೂರು ಜಿಲ್ಲಾಧಿಕಾರಿಗಳು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಡ ಹಬ್ಬ ದಸರಾಗೆ ಆಹ್ವಾನಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರುಗಳು, ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಬಾರಿ ನಾಡ ಹಬ್ಬ ದಸರಾ ಮಹೋತ್ಸವವನ್ನು ಸಾಹಿತಿ ಹಂಪ ನಾಗರಾಜಯ್ಯ ಅವರು ಉದ್ಘಾಟಿಸಲಿದ್ದಾರೆ. ಮೈಸೂರು ದಸರಾ ಉತ್ಸವ ಅ.3-12ರ ವರೆಗೆ ನಡೆಯಲಿದೆ. ಈ ಬಾರಿ ದಸರಾವನ್ನು ವಿಜೃಂಭಣೆಯಿಂದ, ಆಕರ್ಷಣೀಯವಾಗಿ ಹಾಗೂ ಅರ್ಥಪೂರ್ಣವಾಗಿ ಮಾಡಲು ತೀರ್ಮಾನಿಸಲಾಗಿದೆ.
ದಸರಾ ಉದ್ಘಾಟನೆಯ ದಿನದಂದೇ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರ, ವಸ್ತು ಪ್ರದರ್ಶನ, ಕುಸ್ತಿಗೆ ಚಾಲನೆ ದೊರಯಲಿದೆ. ಯುವ ದಸರಾ, ಕ್ರೀಡೆಗಳು ಅಂದೇ ಉದ್ಘಾಟನೆಯಾಗಲಿವೆ. ದೀಪಾಲಂಕಾರವನ್ನು ಈ ಬಾರಿ 21 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚು ಆಕರ್ಷಣೀಯ ದೀಪಾಲಂಕಾರ ಮಾಡುವಂತೆ ಸೂಚನೆ ನೀಡಲಾಗಿದೆ.
ಅ.3 ರಂದು ದಸರಾ ಉದ್ಘಾಟನೆಯಾಗಲಿದೆ. ಅಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವಿಗೆ ಬೆಳಗ್ಗೆ 9.15-9.45 ಗಂಟೆಗೆ ಪೂಜೆ ನಡೆಯಲಿದೆ. ಅ.11ರಂದು ಆಯುಧ ಪೂಜೆ ನೆರವೇರಲಿದೆ. ಅ.12ಗೆ ಜಂಬೂ ಸವಾರಿ ನಡೆಯಲಿದೆ. ಅಂದು ನಂದಿಧ್ವಜ ಪೂಜೆ ಮಧ್ಯಾಹ್ನ 1.41-2.10 ಗಂಟೆಗೆ ನೆರವೇರಲಿದೆ. ಜಂಬೂ ಸವಾರಿಗೆ ಪುಷ್ಪಾರ್ಚನೆ ಸಂಜೆ 4- 4.30 ಗಂಟೆಗೆ ನೆರವೇರಲಿದೆ.