ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ನೆನಪಿನಲ್ಲಿ ತಮ್ಮ ಸ್ವಗ್ರಾಮ ಸೊರಬ ತಾಲೂಕಿನ ಕುಬಟೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಕುಟುಂಬದವರು ಸೇರಿ 10 ಲಕ್ಷ ರೂ. ಮೌಲ್ಯದ ಸ್ಮಾರ್ಟ್ ಟಿವಿ, ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್, ಆಟ್ಲಾಸ್, ಡೆಸ್ಕ್ ಸೇರಿದಂತೆ ವಿವಿಧ ವಸ್ತುಗಳನ್ನು ''ನನ್ನ ಶಾಲೆ, ನನ್ನ ಜವಾಬ್ದಾರಿ'' ಯೋಜನೆಯಡಿ ಶುಕ್ರವಾರ ವಿತರಿಸಿದರು.
ಶಾಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಇಂದು 10 ಲಕ್ಷ ರೂ. ವಸ್ತುಗಳು ನೀಡಿರಬಹುದು. ಮುಂದೆ ಇದೇ ಒಂದು ಸಾವಿರ ಕೋಟಿ ರೂ.ಗೆ ಏರಿಕೆಯಾಗಬಹುದು. ನಾನು ಸರ್ಕಾರಿ ಶಾಲೆಯಲ್ಲಿ ಓದಲೇ ಇಲ್ಲ. ನಮ್ಮ ತಂದೆ ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯವನ್ನು ಆಳಿದ್ದಾರೆ. ನನ್ನ ಪುಣ್ಯ ಇಂತಹ ಸರ್ಕಾರಿ ಶಾಲೆಗಳ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ ಎಂದು ಸಿದ್ದಾಮಯ್ಯನವರಿಗೆ ಧನ್ಯವಾದ ಅರ್ಪಿಸಿದರು.
38 ಸಾವಿರ ಮಕ್ಕಳು ಇಂದು ಸರ್ಕಾರಿ ಶಾಲೆಗೆ ಪ್ರವೇಶ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ 46 ಸಾವಿರ ಶಾಲೆಗಳು ಇವೆ. ಇಷ್ಟು ಶಾಲೆಗೆ ಎಲ್ಲಾ ಪರಿಕರಗಳನ್ನು ನೀಡಲು ಅಸಾಧ್ಯ. ನಮ್ಮ ತಂದೆ ಓದಿರುವ ಶಾಲೆಗೆ ನಮ್ಮ ಋಣ ತೀರಿಸಲು ಇಂದು ಪರಿಕರಗಳನ್ನು ನೀಡುತ್ತಿದ್ದೇವೆ. ಇದೇ ರೀತಿ ಸಾರ್ವಜನಿಕರು ಸಹ ಸಹಕಾರ ನೀಡಬೇಕಿದೆ ಎಂದು ಸಚಿವರು ಕರೆ ನೀಡಿದರು.
ಶಾಲೆಯ ವಿದ್ಯಾರ್ಥಿಗಳಾದ ನವ್ಯ, ಸ್ವಪ್ನ ಹಾಗೂ ರಾಜೇಶ್ವರಿ ಈಟಿವಿ ಭಾರತ ಜೊತೆ ಮಾತನಾಡಿ, ಸಚಿವರು ನಮ್ಮ ಶಾಲೆಗೆ ಕಂಪ್ಯೂಟರ್, ಸ್ಮಾರ್ಟ್ ಟಿವಿ, ಡೆಸ್ಕ್ ಸೇರಿದಂತೆ ವಿವಿಧ ಪರಿಕರಗಳನ್ನು ನೀಡಿದ್ದಾರೆ. ಹೊಸ ಪರಿಕರಗಳನ್ನು ನೋಡಿ ನಮಗೆ ತುಂಬಾ ಸಂತೋಷವಾಗಿದೆ. ಇದನ್ನು ಬಳಸಿಕೊಂಡು ನಾವು ಉತ್ತಮವಾಗಿ ಓದುತ್ತೇವೆ ಎಂದು ತಿಳಿಸಿದರು.
ಶಾಲೆ ಸಹ ಶಿಕ್ಷಕಿ ಶೈಲ ಶೆಟ್ಟಿ ಮಾತನಾಡಿ, ಸಚಿವರು ತಮ್ಮ ತಂದೆಯ ನೆನಪಿಗಾಗಿ 10 ಲಕ್ಷ ಮೌಲ್ಯದ ವಸ್ತುಗಳನ್ನು ನಮ್ಮ ಶಾಲೆಗೆ ನೀಡಿದ್ದಾರೆ. ಇದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ಇದೇ ರೀತಿ ಇನ್ನೂ ಅನೇಕರು ಸರ್ಕಾರಿ ಶಾಲೆಗೆ ಪರಿಕರಗಳನ್ನು ನೀಡಿದರೆ ಉಪಯುಕ್ತವಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಸಿಎಂ ಸಿದ್ದರಾಮಯ್ಯನವರು ಮೊದಲು ತಾವು ಓದಿದ ಶಾಲೆಗೆ 10 ಲಕ್ಷ ರೂ. ಮೌಲ್ಯದ ಶಾಲಾ ಪರಿಕರಗಳನ್ನು ನೀಡಿದ್ದರು. ಇದರಿಂದ ಇತರೆ ಮಂತ್ರಿಗಳು ಸಹ ತಮ್ಮ ತಮ್ಮ ಕ್ಷೇತ್ರದ ಶಾಲೆಗಳಿಗೆ ಶಾಲಾ ಪರಿಕರಗಳನ್ನು ವಿತರಿಸುತ್ತಿದ್ದಾರೆ.
ಇದನ್ನೂ ಓದಿ: ಹಾವೇರಿ: ಸೌಲಭ್ಯ ವಂಚಿತ ಮಾರಂಬೀಡ ಮೊರಾರ್ಜಿ ವಸತಿ ಶಾಲೆ - Lack of Basic facilities