ದಾವಣಗೆರೆ: ದೇಶದಲ್ಲಿ ಮನೆ ಮಾತಾಗಿರುವ ಕೇಂದ್ರ ಸರ್ಕಾರದ ಭಾರತ್ ಅಕ್ಕಿ ಬಡವರಿಗೆ ಆಸರೆಯಾಗಿದೆ. ಆಹಾರ ಸಚಿವ ಪಿಯೂಷ್ ಗೋಯಲ್ ಭಾರತ್ ಅಕ್ಕಿ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದ ಬಳಿಕ ದೇಶದೆಲ್ಲೆಡೆ ಜನ ಮುಗಿಬಿದ್ದು ಅಕ್ಕಿ ಖರೀದಿಯಲ್ಲಿ ತೊಡಗಿದ್ದಾರೆ.
ಇಂದು (ಸೋಮವಾರ) ದಾವಣಗೆರೆ ಜಯದೇವ ವೃತ್ತದಲ್ಲಿ ಒಂದು ಕೆಜಿಗೆ 29 ರೂಪಾಯಿಯಂತೆ ಮಾರಾಟ ಮಾಡಲಾಯಿತು. ಭಾರತ್ ಅಕ್ಕಿಯನ್ನು ಖರೀದಿಸಲು ದಾವಣಗೆರೆ ಜನರು ಮುಗಿ ಬಿದ್ದರು. ಪೊಲೀಸರ ಸಮ್ಮುಖದಲ್ಲಿ ಜನರು ಸಾಲಿನಲ್ಲಿ ನಿಂತು ಅಕ್ಕಿ ಪಡೆದರು. ಈ ವೇಳೆ, ಸಂಸದ ಜಿ ಎಂ ಸಿದ್ದೇಶ್ವರ್ ಅಕ್ಕಿ ವಿತರಣೆ ಮಾಡಿದರು.
ಕಳೆದೆರಡು ದಿನಗಳ ಹಿಂದೆ ದಾವಣಗೆರೆ ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಬಳಿ ಭಾರತ್ ಅಕ್ಕಿ ವಿತರಣೆ ಮಾಡಲಾಗಿತ್ತು. ಜಯದೇವ ವೃತ್ತದಲ್ಲಿ ಟೆಂಟ್ ಹಾಕುವ ಮೂಲಕ ಒಂದು ಕೆಜಿಗೆ 29 ರೂಪಾಯಿಯಂತೆ ಭಾರತ್ ಅಕ್ಕಿಯನ್ನು ಮಾರಾಟ ಮಾಡಲಾಯಿತು. ಮಧ್ಯಮ ವರ್ಗದ ಜನರು ಕಡಿಮೆ ಬೆಲೆಗೆ ಉತ್ತಮ ಅಕ್ಕಿ ಸಿಗುತ್ತಿರುವುದರಿಂದ ಟೋಕನ್ ಪಡೆದು ಎರಡರಿಂದ ಮೂರು ಅಕ್ಕಿ ಪಾಕೇಟ್ ಖರೀದಿ ಮಾಡಿದರು.
''ಜನರು ಭಾರತ್ ಅಕ್ಕಿಯನ್ನು ಖರೀದಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕು'' ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದರು. ಇಂದು ಬೆಳಗ್ಗೆಯಿಂದ ಭಾರತ್ ಅಕ್ಕಿ ವಿತರಣೆ ಮಾಡುವ ಕಾರ್ಯದಲ್ಲಿ ಬಿಜೆಪಿ ಕಾರ್ಯಕರ್ತರು ನಿರತರಾಗಿದ್ದಾರೆ.
ಸಂಸದ ಜಿಎಂ ಸಿದ್ದೇಶ್ವರ್ ಮಾತು: ಭಾರತ್ ಅಕ್ಕಿ ವಿತರಿಸಿ ಮಾತನಾಡಿದ ಸಂಸದ ಜಿ ಎಂ ಸಿದ್ದೇಶ್ವರ, "ಪ್ರಧಾನಿ ಮೋದಿ ಅವರು ಕಡಿಮೆ ದರದಲ್ಲಿ ಜನರಿಗೆ ಭಾರತ್ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. ಈ ಅಕ್ಕಿಯನ್ನು ಎಲ್ಲ ವಾರ್ಡ್ಗಳಿಗೆ ತಲುಪಿಸಲು ಕ್ರಮವಾಗಬೇಕು. ಇದು ದಾವಣಗೆರೆ ನಗರದಲ್ಲಿ ಎರಡನೇ ಬಾರಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಮನೆ ಮನೆಗೆ ಅಕ್ಕಿ ತಲುಪಿಸುವ ಗುರಿ ಹೊಂದಲಾಗಿದೆ. ಇದಲ್ಲದೇ ವಿವಿಧ ಮಹತ್ವದ ಕಾರ್ಯಕ್ರಮಗಳನ್ನು ಮೋದಿ ಅವರು ಜಾರಿ ಮಾಡಿದ್ದಾರೆ. ಇದು ಮೋದಿ ಅವರ ಗ್ಯಾರಂಟಿ ಆಗಿದೆ. 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲುವು ಸಾಧಿಸಿ ಉತ್ತಮ ಜನ ನಾಯಕರಾಗುವುದರ ಜೊತೆಗೆ ವಿಶ್ವನಾಯಕ ಆಗಲಿದ್ದಾರೆ'' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇಂದು ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್, ಇಂದೇ ರಾಜ್ಯದ ಮೊದಲ ಪಟ್ಟಿ ಬಿಡುಗಡೆ: ಯಡಿಯೂರಪ್ಪ