ದೇವನಹಳ್ಳಿ: ತಾಲೂಕಿನ ಗೋಕೆರೆ ಗ್ರಾಮದಲ್ಲಿ ಒಂದು ಗುಂಟೆ ಜಾಗ ಮತ್ತು ಕಾರಿನ ವಿಚಾರಕ್ಕೆ ನಡೆದ ಅಣ್ಣ- ತಮ್ಮನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತಮ್ಮನಿಗೆ ಆಸ್ತಿ ಕೊಡಲು ಒಪ್ಪದ ಅಣ್ಣ ತನ್ನ ಸಹೋದರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಫೆಬ್ರವರಿ 17 ರಂದು ಘಟನೆ ನಡೆದಿದ್ದು, ಸುಟ್ಟ ಗಾಯಗಳಿಂದ ನರಳುತ್ತಿದ್ದ ಜಗದೀಶ್ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾನೆ. ಆರೋಪಿತ ಅಣ್ಣ ವೆಂಕಟೇಶ್ನನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಮೃತ ಜಗದೀಶ್ ಮತ್ತು ವೆಂಕಟೇಶ್ ಒಂದೇ ತಾಯಿ ಮಕ್ಕಳು. ತಮ್ಮ ಜಗದೀಶ್ ಮನೆ ಕಟ್ಟಿಕೊಳ್ಳಲು ಒಂದು ಗುಂಟೆ ಜಾಗವನ್ನು ಕೇಳಿದ್ದ. ಆದರೆ, ತಮ್ಮನಿಗೆ ಆಸ್ತಿ ಕೊಡಲು ಇಷ್ಟವಿಲ್ಲದ ಅಣ್ಣ ಹಾಗೂ ತಮ್ಮನ ನಡುವೆ ಇದೇ ವಿಚಾರಕ್ಕೆ ನಿತ್ಯ ಜಗಳವಾಗುತ್ತಿತ್ತು. ಈ ಮಧ್ಯೆ ಒಟ್ಟು ಕುಟುಂಬವಿದ್ದಾಗ ತಮ್ಮನ ಹೆಸರಲ್ಲಿ ಕಾರು ಖರೀದಿ ಮಾಡಲಾಗಿತ್ತು.
ಮದುವೆಯಾದ ನಂತರ ಅಣ್ಣ- ತಮ್ಮ ಬೇರೆ ಬೇರೆಯಾಗಿದ್ದರು. ಕಾರನ್ನು ತಮ್ಮನೇ ಓಡಿಸುತ್ತಿದ್ದ. ಕಾರನ್ನು ತನಗೆ ಕೊಡುವಂತೆ ಅಣ್ಣ ಕೇಳಿದ್ದ. ಫೆಬ್ರವರಿ 17ರ ರಾತ್ರಿ ಇದೇ ಕಾರಿನ ವಿಚಾರಕ್ಕೆ ಅಣ್ಣ ತಮ್ಮನ ನಡುವೆ ಜಗಳವಾಗಿದೆ. ಅಣ್ಣ ವೆಂಕಟೇಶ್ ತಮ್ಮನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ ಎನ್ನಲಾಗಿದೆ. ಶೇಕಡಾ 70ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ತಮ್ಮನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ.
ಘಟನೆ ಬಗ್ಗೆ ಮೃತ ಜಗದೀಶ್ ಸಂಬಂಧಿ ಹೇಳಿದ್ದಿಷ್ಟು: ಮೃತ ಜಗದೀಶ್ ಸಂಬಂಧಿ ಗಿರೀಶ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, "ಒಂಬತ್ತು ವರ್ಷಗಳ ಹಿಂದೆ ಜಗದೀಶ್ ಅವರಿಗೆ ನನ್ನ ತಂಗಿಯನ್ನು ಮದುವೆ ಮಾಡಿ ಕೊಡಲಾಗಿತ್ತು. ಅಂದಿನಿಂದಲೂ ನನ್ನ ತಂಗಿ ಇಲ್ಲಿ ಖುಷಿಯಾಗಿರಲಿಲ್ಲ. ತಿಂಗಳಲ್ಲಿ ಎರಡರಿಂದ ಮೂರು ಬಾರಿಯಾದರೂ ಗಲಾಟೆಗಳು ನಡೆಯುತ್ತಲೇ ಇರುತ್ತಿತ್ತು. ಅಣ್ಣ ತಮ್ಮ ಗಲಾಟೆ ಮಾಡಿಕೊಳ್ಳುವುದು ಮಾತ್ರವಲ್ಲದೇ, ನನ್ನ ತಂಗಿಗೆ ಹೊಡೆಯುವುದನ್ನೂ ಮಾಡುತ್ತಿದ್ದರು. ಹತ್ತು ದಿನಗಳ ಹಿಂದೆ ಅಣ್ಣ ತಮ್ಮ ಇಬ್ಬರೂ ಖಾರದಪುಡಿ ಚೆಲ್ಲಿಕೊಂಡು, ಕಿತ್ತಾಡಿಕೊಂಡಿದ್ದರು. ಆದರೆ ನನ್ನ ತಂಗಿ ಈ ಬಗ್ಗೆ ಆಗ ನಮಗೆ ಏನೂ ಹೇಳಿರಲಿಲ್ಲ. ಆದರೆ, ಈಗ ನನ್ನ ತಂಗಿ ಗಂಡ ಜಗದೀಶ್ ಅವರು, ಅವರ ಅಣ್ಣನ ಜೊತೆ ಮನೆ ಕಟ್ಟಲು ಒಂದು ಗುಂಟೆ ಜಾಗ ಕೇಳಿದ್ದರು. ಜಮೀನು ಕೊಡಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿಕೊಂಡಿದ್ದರು. ಅಣ್ಣ ವೆಂಕಟೇಶ್, ಅವರ ಅಮ್ಮ, ತಮ್ಮ ಮೂವರು ಸೇರಿ, ಜಮೀನು ಕೊಡಬೇಕಾಗುತ್ತದೆ ಎಂದು ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
"ಜಗದೀಶ್ ಅವರ ಅಕ್ಕನ ಮಗ ಇವರ ಕಾರು ತೆಗೆದುಕೊಂಡು ಹೋಗಿದ್ದನಂತೆ, ಆ ಕಾರು ಜಗದೀಶ್ ಅವರ ಹೆಸರಿನಲ್ಲೇ ಇದೆ. ಆದರೆ, ಅವರ ಅಣ್ಣ ಬೇಕು ಅಂತಲೇ ಹೋಗಿ, ಪ್ರಶ್ನೆ ಮಾಡಿ, ಆ ಕಾರನ್ನು ವಾಪಸ್ ತೆಗೆದುಕೊಂಡು ಬಂದಿದ್ದರಂತೆ. ಈ ವಿಷಯವಾಗಿಯೇ ಗಲಾಟೆ ಎಬ್ಬಿಸಿ, ನಾಲ್ಕೂ ಜನ ಸೇರಿ ನಮ್ಮ ಭಾವನಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಯಾರೂ ಮನೆಯಲ್ಲಿ ಪೆಟ್ರೋಲ್ ತಂದಿಡುವುದಿಲ್ಲ. ಆದರೆ ಇವರು ಮೊದಲೇ ಪ್ಲ್ಯಾನ್ ಮಾಡಿ ಪೆಟ್ರೋಲ್ ಕೂಡ ತಂದಿಟ್ಟಿದ್ದರು. ಅಣ್ಣ ವೆಂಕಟೇಶ್, ಅಮ್ಮ ಕೃಷ್ಣಮ್ಮ, ತಮ್ಮ ಸಂತೋಷ್ ಸೇರಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಬೆಂಕಿ ನಂದಿಸಲು ಹೋದ ತಂಗಿಯನ್ನು ತಡೆದಿದ್ದಾರೆ. 70 ಶೇಕಡಾ ಸುಟ್ಟು ಹೋಗುವವರೆಗೆ ಕಾದು, ನಂತರ ಬಿಟ್ಟಿದ್ದಾರೆ. ನಂತರ ನನ್ನ ತಂಗಿ, ಭಾವನನ್ನು ದೇವನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹಾಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲೂ ವೈದ್ಯರು ಬದುಕುಳಿಯಲ್ಲ ಎಂದೇ ಹೇಳಿದ್ದರು. ಮೂರು ದಿನದಲ್ಲಿ ಭಾವ ಸಾವನ್ನಪ್ಪಿದ್ದಾರೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬರೇಲಿ ಸೇನಾ ಶಿಬಿರದಲ್ಲಿ ಕೊಲೆ: ಕಾನ್ಸ್ಟೇಬಲ್ಗೆ ರೈಫಲ್ನಿಂದ ಗುಂಡು ಹಾರಿಸಿದ ಸೈನಿಕ