ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ನಡುವೆ ದಿಶಾ ಸಭೆಯಲ್ಲಿ ಜಟಾಪಟಿ ನಡೆಯಿತು. ಧಾರವಾಡದ ಜಿಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಇಬ್ಬರ ನಡುವೆ ಮಾತುಕತೆ ಬಿರುಸಾಯಿತು.
"ಕೆಲ ರೈತರಿಗೆ ಬೆಳೆ ಪರಿಹಾರ ಬಂದಿದೆ. ಕೆಲ ರೈತರಿಗೆ ಇನ್ನೂ ಬಂದಿಲ್ಲ ತಹಶೀಲ್ದಾರ್ ಕಚೇರಿಗೆ ಹೋದರೆ ತಹಶೀಲ್ದಾರ್ ರೈತರನ್ನು ಭೇಟಿಯಾಗುವುದಿಲ್ಲ" ಎಂದು ಕೇಂದ್ರ ಸಚಿವ ಜೋಶಿ ಪ್ರಶ್ನೆ ಎತ್ತಿದರು. "ಯಾವುದೇ ಸರ್ಕಾರ ಇದ್ದರು, ರೈತರಿಗೆ ಸೂಕ್ತ ಸೌಲಭ್ಯ ಸಿಗಬೇಕು" ಎಂದು ಸಚಿವರು ಹೇಳುತ್ತಿದ್ದಂತೆ ಶಾಸಕ ಕೋನರೆಡ್ಡಿ ಸಿಡಿಮಿಡಿಗೊಂಡರು.
"ಯಾವ ತಹಶೀಲ್ದಾರರು ಕಚೇರಿಯಲ್ಲಿ ಇಲ್ಲ ಹೇಳಿ? ಎಸಿ ಸಿಗ್ತಾರಂದ್ರೆ ತಹಶೀಲ್ದಾರ್ ಸಿಗಲ್ಲ ಎಂದರೆ ಹೇಗೆ? ನಾವೂ ಸ್ವಚ್ಛ ಆಡಳಿತ ಮಾಡಲೆಂದೇ ಕುಳಿತಿದ್ದೇವೆ. ನಾವೇನು ಕಾಲಹರಣ ಮಾಡುತ್ತಿಲ್ಲ. ಅಧಿಕಾರಿಗಳು ಯಾರು ಸಿಕ್ಕಿಲ್ಲ ಹೇಳಿ" ಎಂದು ಅಧಿಕಾರಿಗಳ ಮೇಲೆ ಕೋನರೆಡ್ಡಿ ಗರಂ ಆದರು.
ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಮಧ್ಯಪ್ರವೇಶಿಸಿ, "ತಹಶೀಲ್ದಾರ್ ಸಿಗುತ್ತಿಲ್ಲ. ಕೆಲಸ ಏನಾಗಿದೆ ಎಂದು ಹೇಳಬೇಕಲ್ಲ" ಎಂದು ಜೋಶಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. "ನಮ್ಮ ಸರ್ಕಾರ ನಿಮ್ಮ ಸರ್ಕಾರ ಎಂದು ಈ ವೇದಿಕೆ ಮೇಲೆ ಮಾತನಾಡುವುದು ಬೇಡ. ಆ ಶಬ್ದ ಇಲ್ಲಿ ನಾನು ಬಳಿಸಿಯೇ ಇಲ್ಲ. ಈ ಸಭೆಯನ್ನು ರಾಜಕೀಯಕ್ಕೆ ಬಳಸುವುದು ಬೇಡ. ಯಾವುದೇ ಸರ್ಕಾರ ಇದ್ದರೂ ಜನರಿಗೆ ಸೌಲಭ್ಯ ಸಿಗಬೇಕು. ನೀವು ಟೆನ್ಶನ್ ತೆಗೆದುಕೊಳ್ಳಬೇಡಿ" ಎಂದು ಕೋನರೆಡ್ಡಿಗೆ, ಜೋಶಿ ಉತ್ತರಿಸಿದರು.
"ಸಿಎಂ ನನ್ನ ಜೊತೆ ಚೆನ್ನಾಗಿದ್ದಾರೆ. ದಿಶಾ ಸಭೆಯಲ್ಲಿ ನಿಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ನಿಮ್ಮನ್ನು ಮಂತ್ರಿ ಮಾಡಿ ಎಂದು ಹೇಳುತ್ತೇನೆ ಬಿಡಿ" ಎಂದು ಕೋನರೆಡ್ಡಿಗೆ ಜೋಶಿ ಹೇಳಿದರು. ಬಳಿಕ ಉಭಯ ನಾಯಕರು ಹಾಸ್ಯ ಚಟಾಕಿ ಹಾರಿಸಿದರು.
"ಕಳಸಾ, ಬಂಡೂರಿ ಕೆಲಸವೊಂದು ಮಾಡಿಕೊಡಿ ಸರ್" ಎಂದು ಮನವಿ ಮಾಡಿದ ಕೋನರೆಡ್ಡಿ, "ನೀವು ಯಾವ ಕೆಲಸ ಮಾಡಿಲ್ಲವೋ, ಆ ಕೆಲಸ ಮಾಡಲೆಂದೇ ನಾವು ಬಂದಿದ್ದೇವೆ" ಎಂದು ಜೋಶಿ ಹೇಳಿದರು.
ಇನ್ನು ಸಭೆಯಲ್ಲಿ "ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಉದ್ಘಾಟನೆಗೆ ಯಾಕೆ ಆಮಂತ್ರಿಸಿಲ್ಲ, ನನ್ನ ಟೈಮ್ ಸಹ ಕೇಳಿಲ್ಲ. ಹೀಗಾದ್ರೆ ಹೇಗೆ?" ಎಂದು ಜೋಶಿ ಅಧಿಕಾರಿಗಳಿಗೆ ಪ್ರಶ್ನಿಸಿದರು. "ಮುಂದೆ ಈ ರೀತಿ ನಡೆದುಕೊಂಡರೆ ಸರಿ ಇರಲ್ಲ. ಆ ರೀತಿಯಾಗದಂತೆ ನೋಡಿಕೊಳ್ಳಿ" ಎಂದು ಸೂಚಿಸಿದರು.