ಮಂಗಳೂರು: ಒಂದೊಮ್ಮೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕಳೆದ ಮೂರು ದಶಕಗಳಿಂದ ಬಿಜೆಪಿ ಕೋಟೆಯಾಗಿ ಬದಲಾಗಿದೆ. ಕಳೆದ ಎರಡು ದಶಕಗಳಿಂದ ಬಿಜೆಪಿ ಅನಾಯಾಸವಾಗಿ ಗೆದ್ದಿದೆ. ಮತ ಎಣಿಕೆಯ ಮೊದಲೇ ಬಿಜೆಪಿ ಗೆಲುವು ಸಾಧಿಸುತ್ತೆ ಎಂಬ ಅಲೆ ಕಂಡುಬರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯುತ್ತಿದ್ದು, ಲೋಕಸಭಾ ಕ್ಷೇತ್ರ ಯಾರ ಪಾಲಾಗಲಿದೆ ಎಂಬುದು ಸದ್ಯದ ಕೌತುಕ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಹೊಸ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ನಲ್ಲಿ ಜನಾರ್ದನ ಪೂಜಾರಿ ಶಿಷ್ಯ ಪದ್ಮರಾಜ್ ಪೂಜಾರಿಗೆ ಟಿಕೆಟ್ ನೀಡಲಾಗಿದೆ. ಇವರಿಬ್ಬರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪ್ರಮುಖ ಪಕ್ಷದ ಅಭ್ಯರ್ಥಿಯಾದರೂ ಈವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಬಿಜೆಪಿ ಸತತ ಗೆಲುವು ಸಾಧಿಸುತ್ತಲೇ ಬಂದಿದೆ. ಧನಂಜಯಕುಮಾರ್, ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಇಲ್ಲಿ ಸತತವಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಧನಂಜಯಕುಮಾರ್ ಅವರಿಂದ ಆರಂಭವಾದ ಬಿಜೆಪಿಯ ವಿಜಯ ಯಾತ್ರೆಯಲ್ಲಿ ಪ್ರತಿ ಚುನಾವಣೆಯಲ್ಲಿ ಗೆಲುವಿನ ಅಂತರ ಹೆಚ್ಚಾಗುತ್ತಲೇ ಹೋಗಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ನಳಿನ್ ಕುಮಾರ್ ಕಟೀಲ್ 2.75 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಇದೇ ಮೊದಲ ಬಾರಿಗೆ ಬಿಜೆಪಿಗೆ ಗೆಲುವು ಸುಲಭದ ತುತ್ತಲ್ಲ ಎಂದು ಹೇಳಲಾಗುತ್ತಿದೆ.
ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ 1991ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸೋಲನುಭವಿಸಿದ ಬಳಿಕ ಕಾಂಗ್ರೆಸ್ ಸತತ ಸೋಲು ಕಂಡಿದೆ. ಜನಾರ್ದನ ಪೂಜಾರಿ ಬಳಿಕ ವೀರಪ್ಪ ಮೊಯ್ಲಿ, ಮಿಥುನ್ ರೈ ಅವರನ್ನು ಅಭ್ಯರ್ಥಿ ಮಾಡಿದರೂ ಕಾಂಗ್ರೆಸ್ಗೆ ಜಯ ಸಾಧ್ಯವಾಗಿರಲಿಲ್ಲ. ಅಷ್ಟೇ ಏಕೆ ಚುನಾವಣೆ ವೇಳೆ ಕೈ ಪರ ವಾತಾವರಣವೂ ಕಂಡುಬರುತ್ತಿರಲಿಲ್ಲ. ಆದರೆ ಈ ಬಾರಿ ಚಿತ್ರಣ ಬದಲಾಗಿದೆ.
ಬಿಲ್ಲವ ಫ್ಯಾಕ್ಟರ್: ಕಾಂಗ್ರೆಸ್ ಪಕ್ಷ ಈ ಬಾರಿ ಪದ್ಮರಾಜ್ ಪೂಜಾರಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಲ್ಲವ ಮತ ಕ್ರೋಢೀಕರಣದ ತಂತ್ರಗಾರಿಕೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಮತದಾರರ ಸಂಖ್ಯೆ ಸಿಂಹಪಾಲು. ಆದರೆ ಬಿಲ್ಲವರು ಪರಂಪರಾಗತ ಬಿಜೆಪಿ ಮತದಾರರು. ಕುದ್ರೋಳಿ ಕ್ಷೇತ್ರದಲ್ಲಿ ಖಜಾಂಚಿಯಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದ ಪದ್ಮರಾಜ್ ಪೂಜಾರಿ ಬಿಲ್ಲವರ ನಾಯಕರು. ಅವರನ್ನು ಚುನಾವಣೆಯಲ್ಲಿ ನಿಲ್ಲಿಸುವ ಮೂಲಕ ಬಿಲ್ಲವರ ಮತ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಮೊದಲ ಬಾರಿಗೆ ಹೆಚ್ಚಿನ ಬಿಲ್ಲವ ಸಂಘಟನೆಗಳು ಪದ್ಮರಾಜ್ ಪೂಜಾರಿ ಪರ ಹಿಂಬಾಗಿಲಿನಿಂದ ಮತ್ತು ನೇರವಾಗಿ ಕೆಲಸ ಮಾಡಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಬಿಲ್ಲವರು ಪರಂಪರಾಗತ ಬಿಜೆಪಿ ಮತದಾರರಾಗಿದ್ದರಿಂದ ಕಾಂಗ್ರೆಸ್ ತಂತ್ರ ವರ್ಕ್ ಆಗಲ್ಲ ಅನ್ನೋದು ಬಿಜೆಪಿಗರ ಲೆಕ್ಕಾಚಾರ.
ಕಾಂಗ್ರೆಸ್ ಗ್ಯಾರಂಟಿ: ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆತ್ಮವಿಶ್ವಾಸ ಇರುವುದು ಗ್ಯಾರಂಟಿ ಯೋಜನೆ ಮೇಲೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಘೋಷಣೆಗಳಿಂದ ರಾಜ್ಯದ ಇತರೆಡೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿದ್ದರೆ, ಕರಾವಳಿಯಲ್ಲಿ ಗ್ಯಾರಂಟಿ ಘೋಷಣೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭವಾಗಿರಲಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆ ಘೋಷಣೆಗಳನ್ನು ಜಾರಿ ಮಾಡಿದ್ದರಿಂದ ಅದರ ಫಲಾನುಭವಿಗಳು ಕಾಂಗ್ರೆಸ್ ಪಕ್ಷಕ್ಕೆ ದಕ್ಷಿಣ ಕನ್ನಡ ದಲ್ಲಿಯೂ ದೊಡ್ಡ ಮಟ್ಟದ ಬೆಂಬಲ ನೀಡಲಿದ್ದಾರೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ನೋಟ ಅಭಿಯಾನ: ಬೆಳ್ತಂಗಡಿಯ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಹೋರಾಟ ಭಾಗವಾಗಿ ಈ ಬಾರಿ ಹೋರಾಟಗಾರರು ನೋಟ ಅಭಿಯಾನಕ್ಕೆ ಕರೆ ನೀಡಿದ್ದರು. ಈ ಬಾರಿ ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ದೊಡ್ಡ ಮಟ್ಟದ ನೋಟ ಮತದಾನವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಯಾವ ಪಕ್ಷಕ್ಕೆ ಹೊಡೆತ ಕೊಡಲಿದೆ ಎಂಬುದ ಕಾದು ನೋಡಬೇಕು.
ಮೂರು ದಶಕಗಳ ಏರುಮುಖ ಅಂತರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದ ಮೂರು ದಶಕಗಳಲ್ಲಿ ಏರುಮುಖ ಅಂತರ ಪಡೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ 2.75 ಲಕ್ಷ ಅಂತರ ಇತ್ತು. ಈ ಬಾರಿ ಕೊಂಚ ಕಡಿಮೆಯಾದರೂ ಗೆಲುವಿನ ಮೇಲೆ ಪ್ರಭಾವ ಬೀರಲ್ಲ. ಜಿಲ್ಲೆಯಲ್ಲಿ ಸಂಘ ಪರಿವಾರದ ಸಂಘಟನೆಗಳಲ್ಲಿ ಸಕ್ರೀಯವಾಗಿರುವ ಸಾವಿರಾರು ಯುವಕರು, ಹಿಂದುತ್ವದಲ್ಲಿ ನಂಬಿಕೆಯಿರಿಸಿರುವ ಜನರು ಬಿಜೆಪಿಯಿಂದ ದೂರ ಹೋಗುವುದಿಲ್ಲ ಎಂಬ ಅಚಲ ವಿಶ್ವಾಸವನ್ನು ಪಕ್ಷ ಹೊಂದಿದೆ. ಪ್ರಧಾನಿ ಮೋದಿ ಹೆಸರು ಕ್ಷೇತ್ರದಲ್ಲಿ ಬಿಜೆಪಿಗೆ ಮತಗಳನ್ನು ತರಲಿದೆ. ಜೊತೆಗೆ ಜೊತೆಗೆ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದು, ಆನೆ ಬಲಬಂದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಬಾರಿ 2019ರಲ್ಲಿ ಶೇ. 77.99 ರಷ್ಟು ಮತದಾನ ದಾಖಲಾಗಿತ್ತು. ಈ ಬಾರಿ ಕೊಂಚ ಕಡಿಮೆಯಾಗಿ ಶೇ.77.56ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಪಕ್ಷಗಳು ಈ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿವೆ. ಹಿಂದಿನ ಲೆಕ್ಕಾಚಾರಕ್ಕೆ ಹೋಲಿಸಿದರೆ ಬಿಜೆಪಿಗೆ ಗೆಲುವು ಸುಲಭದ ತುತ್ತಲ್ಲ. ಆದರೆ ಕಾಂಗ್ರೆಸ್ ಗೆದ್ದೆ ಬಿಡುತ್ತೆ ಎಂಬ ಅಲೆಯೂ ಇಲ್ಲ. ಎರಡು ಪಕ್ಷಗಳಲ್ಲಿ ಸಮಬಲದ ಹೋರಾಟ ಇದೆ. ಜೂನ್ 4 ರಂದು ಪ್ರಕಟವಾಗುವ ಫಲಿತಾಂಶ ಇದಕ್ಕೆಲ್ಲ ಉತ್ತರವಾಗಲಿದೆ.
ಇದನ್ನೂ ಓದಿ: ಬೆಳಗಾವಿ ಲೋಕಸಮರ: ಶೆಟ್ಟರ್ - ಮೃಣಾಲ್ ಮಧ್ಯೆ ಜಿದ್ದಾಜಿದ್ದಿ, ಹೇಗಿದೆ ಲೆಕ್ಕಾಚಾರ? - Belagavi Lokasabha Fight