ಧಾರವಾಡ: ಲೋಕಸಭೆ ಚುನಾವಣೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ ಲಾಡ್ ಪ್ರತಿಕ್ರಿಯಿಸಿದ್ದಾರೆ. ಸ್ವಾಮೀಜಿ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅವರಿಗೆ ಧಾರವಾಡ ಜಿಲ್ಲೆಯಲ್ಲೇ ಲಕ್ಷಾಂತರ ಭಕ್ತರಿದ್ದಾರೆ. ಚೆನ್ನಾಗಿ ಮಾತನಾಡುವ ಶಕ್ತಿ ಅವರಿಗಿದೆ. ನಾವು ಅವರ ಅಶೀರ್ವಾದದೊಂದಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. ಅವರೇ ಸ್ಪರ್ಧೆ ಮಾಡಿದರೂ ನಾವು ಆಶೀರ್ವಾದ ಕೋರುತ್ತೇವೆ. ಲಿಂಗಾಯತ, ಹಿಂದೂ, ಮುಸ್ಲಿಂ, ಸಿಖ್ ಎಲ್ಲ ಸಮಾಜದಿಂದ ಅವರಿಗೆ ಅನುಯಾಯಿಗಳಿದ್ದಾರೆ ಎಂದು ಹೇಳಿದರು.
ಪ್ರಹ್ಲಾದ ಜೋಶಿ ಮೊದಲು ಅಡ್ವಾಣಿ, ವಾಜಪೇಯಿ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರನ್ನು ಮರೆತಿದ್ದಾರೆ. ಬಿಜೆಪಿಯವರು ಯಾರದ್ದು ನಡೆಯುತ್ತೋ ಅವರ ಪಿಕ್ಚರ್ ಹಿಡಿದುಕೊಂಡು ಹೋಗಿಬಿಡ್ತಾರೆ. ಜನ ಈ ಸಲ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ದಿಂಗಾಲೇಶ್ವರ ಸ್ವಾಮೀಜಿ ಭೇಟಿ ವಿಚಾರಕ್ಕೆ ಮಾತನಾಡಿದ ಅವರು, ನಾವು ಪ್ರಚಾರ ಶುರು ಮಾಡಿದಾಗ ಅವರು ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರು ಚರ್ಚೆಗಳನ್ನು ನಡೆಸಿದ್ದರು. ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಅದಾಗಲೇ ನಾವು ಅಸೂಟಿ ಪರ ಪ್ರಚಾರ ಶುರು ಮಾಡಿದ್ವಿ. ಹೀಗಾಗಿ ಅವರನ್ನು ಭೇಟಿಯಾಗಲು ಆಗಿಲ್ಲ. ಆ ವಿಷಯದಲ್ಲಿ ನಾವು ಹೆಲ್ಪ್‌ಲೆಸ್ ಆಗಿಬಿಟ್ವಿ. ಆದರೆ ಅವರ ಭಾವನೆಗಳನ್ನು ಮಾತ್ರ ಅರ್ಥ ಮಾಡಿಕೊಂಡಿದ್ದೆವು ಎಂದರು.
ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಚಾರಕ್ಕೆ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ನಾನು ಕುರುಬ ಸಮುದಾಯ ಅಭ್ಯರ್ಥಿ. ಎಲ್ಲ ಸಮುದಾಯದವರನ್ನೂ ಸಮನಾಗಿ ತೆಗೆದುಕೊಂಡು ಹೋಗುವ ಪಕ್ಷ ಅಂದ್ರೆ ಕಾಂಗ್ರೆಸ್ ಪಕ್ಷ. ಸಮುದಾಯದ ಮತ ಬಿದ್ದರೆ ಗೆಲ್ಲುತ್ತೇವೆ ಎನ್ನುವುದಕ್ಕೆ ಆಗಲ್ಲ. ಎಲ್ಲ ಸಮುದಾಯದ ಜನಾಂಗದವರ ಮತಗಳೂ ಬೇಕು. ಈ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುತ್ತೇವೆ. ಈಗಾಗಲೇ 14 ಜಿ.ಪಂ ಕ್ಷೇತ್ರದಲ್ಲಿ ಅದ್ಧೂರಿ ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ದಾವಣಗೆರೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಜಿ.ಬಿ.ವಿನಯ್ ಕುಮಾರ್ ನಿರ್ಧಾರ - G B Vinay Kumar