ಹುಬ್ಬಳ್ಳಿ: ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳ ಮುನಿಸು ಸ್ಥಳೀಯ ಮಟ್ಟದ ನಾಯಕರನ್ನು ಮೀರಿ ಹೋಗಿದೆ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ದಿಂಗಾಲೇಶ್ವರ ಶ್ರೀಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸುವುದಾಗಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಲು ಅಸಾಧ್ಯ. ನಡೆದಿರುವ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ನಡೆಯುವುದಾಗಿ ದಿಂಗಾಲೇಶ್ವರ ಶ್ರೀಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ನಾಯಕರು ಮನವರಿಕೆ ಮಾಡಿಕೊಡುವರು ಎಂದರು.
ದಿಂಗಾಲೇಶ್ವರ ಶ್ರೀಗಳು ರಾಜ್ಯದ ದೊಡ್ಡ ಮಠಾಧೀಶರಾಗಿರುವ ಕಾರಣ, ರಾಷ್ಟ್ರೀಯ ನಾಯಕರುಗಳು ಚರ್ಚೆ ನಡೆಸಿ, ಅವರನ್ನು ಸಮಾಧಾನ ಪಡಿಸುವರು. ಈ ನಿಟ್ಟಿನಲ್ಲಿ ನಾನು ವೈಯಕ್ತಿಕವಾಗಿ ಪ್ರಯತ್ನಿಸುವೆ ಎಂದು ಅವರು ಹೇಳಿದರು.
ವಚನಾನಂದ ಶ್ರೀಗಳು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಪಂಚಮಸಾಲಿಗಳಗೆ ನೀಡಿರುವ ಸ್ಥಾನಮಾನಗಳಿಗೆ ಸವಿವರವಾಗಿ ಬರುವ ಏಪ್ರಿಲ್ 14 ರಂದು ಹರಿಹರದ ಪಂಚಮಸಾಲಿ ಪೀಠದಲ್ಲಿ ನಡೆಯಲಿರುವ ವಿಶೇಷ ಸಭೆಯಲ್ಲಿ ಮನವರಿಕೆ ಮಾಡಿಕೊಡಲಾಗುವುದು. ಈ ಸಭೆಯಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಈಗಾಗಲೇ ವಚನಾನಂದ ಶ್ರೀಗಳು ಭೇಟಿಗೆ ಸಮಯ ಪಡೆಯಲಾಗಿದ್ದು, ಏಪ್ರಿಲ್ 14 ರ ಬಳಿಕ ಎಲ್ಲವೂ ಸರಿ ಹೋಗಲಿದೆ ಎಂದ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾವುದೇ ನಾಯಕರು ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದರು.
ಓದಿ: ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶವಿದೆ: ವಿಜಯೇಂದ್ರ - B Y Vijayendra