ಬೆಂಗಳೂರು: ರಾಜ್ಯ ಅಗ್ನಿಶಾಮಕ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಸೇವೆ ಸಲ್ಲಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರು ಜೂನ್ 30ರಂದು ನಿವೃತ್ತಿಯಾಗಲಿದ್ದು, ಈ ಮೂಲಕ 34 ವರ್ಷಗಳ ಪೊಲೀಸ್ ಸೇವೆಗೆ ಅಂತ್ಯ ಹಾಡಲಿದ್ದಾರೆ.
1990ರ ಬ್ಯಾಚ್ನ ಅಧಿಕಾರಿಯಾಗಿರುವ ಪಂತ್, ದಕ್ಷತೆ, ಪ್ರಾಮಾಣಿಕತೆ ಹಾಗೂ ಇಲಾಖೆಯಲ್ಲಿ ಹಲವು ನೂತನ ಸುಧಾರಣೆಗಳಿಗೆ ಕಾರಣೀಭೂತರಾಗಿದ್ದರು. ಉತ್ತರಾಖಂಡ್ ಮೂಲದ ಇವರು, ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಪಡೆದು, ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕ ಕೇಡರ್ನ ಐಪಿಎಸ್ ಸೇವೆ ಆರಂಭಿಸಿದ್ದರು.
1994ರಲ್ಲಿ ಶಿವಮೊಗ್ಗದ ಭದ್ರಾವತಿಯಲ್ಲಿ ಎಎಸ್ಪಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಎಸ್ಪಿ, ಡಿಐಜಿ, ಐಜಿಪಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿಬಿಐ, ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಲೋಕಾಯುಕ್ತದಲ್ಲಿ ಕೆಲಸ ಮಾಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರ ಸೇವೆಯನ್ನು ಶಾಘ್ಲಿಸಿ ರಾಷ್ಟ್ರಪತಿ ಹೆಸರಿನ ಜೀವಮಾನ ಪೊಲೀಸ್ ಪದಕ ಸೇರಿ ಇನ್ನಿತರ ಪದಕಗಳು ಹಾಗೂ ಗೌರವಗಳಿಗೆ ಭಾಜನರಾಗಿದ್ದಾರೆ.
ಮಾಜಿ ಲೋಕಾಯುಕ್ತ ಭಾಸ್ಕರ್ ರಾವ್ ಹಾಗೂ ಅವರ ಪುತ್ರನ ಮೇಲೆ ಲಂಚ ಪ್ರಕರಣದಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ಎಸ್ಐಟಿ ತಂಡದ ಮುಖ್ಯಸ್ಥರಾಗಿದ್ದ ಕಮಲ್ ಪಂತ್, ಭಾಸ್ಕರ್ ರಾವ್ ಹಾಗೂ ಪುತ್ರ ಸೇರಿ ಆರು ಮಂದಿಯನ್ನು ಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಮೂಲಕ ಲೋಕಾಯುಕ್ತಕ್ಕೆ ಅಂಟಿದ್ದ ಕಳಂಕ ತೊಲಗಿಸಿದ್ದರು. ಆಧುನಿಕ ಕಾರಾಗೃಹ ಕೈಪಿಡಿ ರಚಿಸಿದ ಸಮಿತಿಯ ಭಾಗವಾಗಿಯೂ ಇದ್ದರು.
ಕೋಟ್ಯಂತರ ರೂಪಾಯಿ ಸ್ಟ್ಯಾಂಪ್ ಪೇಪರ್ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿಗೆ ಶಿಕ್ಷೆ ಕೊಡಿಸುವಲ್ಲಿ ನೆರವಾಗಿದ್ದರು. 2020-22ರವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಪೊಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆದ್ಯತೆ ನೀಡಿದ್ದರು. ಸೈಬರ್ ಅಪರಾಧ ಹತ್ತಿಕ್ಕಲು ಬ್ಯಾಂಕ್ಗಳ ನೆರವಿನೊಂದಿಗೆ ಸೈಬರ್ ಗೋಲ್ಡನ್ ಆವರ್ಸ್ ಯೋಜನೆ ಜಾರಿ, ಆನ್ಲೈನ್ನಲ್ಲಿ ಬಂದೂಕು ಪರವಾನಗಿ ಪಡೆಯಲು ಪೋರ್ಟಲ್ ರಚನೆ, ಟ್ರಾಫಿಕ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾ, ನಿರ್ಭಯಾ ಯೋಜನೆಯಡಿ ಸೇಫ್ ಸಿಟಿ ನಗರ ಯೋಜನೆಗೆ ಬುನಾದಿ ಹಾಕಿದ್ದರು.
ಇದುವರೆಗೆ ಎಲ್ಲೆಲ್ಲಿ ಸೇವೆ?
- 1994 - ಭದ್ರಾವತಿ ಟೌನ್ ಎಎಸ್ಪಿ
- 1998 -2000- ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಸ್ಪಿ
- 2001-2005 - ಸಿಬಿಐ (ದೆಹಲಿ)
- 2006-2008 - ಡಿಐಜಿ ರಾಜ್ಯ ಗುಪ್ತವಾರ್ತೆ ಬೆಂಗಳೂರು
- 2008-2011 - ಐಜಿಪಿ, ಕೇಂದ್ರ ವಿಭಾಗ
- 2011-2013 - ಐಜಿಪಿ, ಆಡಳಿತ, ರಾಜ್ಯ ಪ್ರಧಾನ ಕಚೇರಿ ಬೆಂಗಳೂರು
- 2013-2014 - ಹೆಚ್ಚುವರಿ ಪೊಲೀಸ್ ಆಯುಕ್ತ ಬೆಂಗಳೂರು
- 2014-2015 - ಎಡಿಜಿಪಿ ಬಂಧೀಖಾನೆ ಇಲಾಖೆ
- 2015-2016 - ಎಡಿಜಿಪಿ, ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ಪಿ)
- 2016-2017- ಎಡಿಜಿಪಿ, ಆಡಳಿತ ವಿಭಾಗ, ಪೊಲೀಸ್ ಪ್ರಧಾನ ಕಚೇರಿ
- 2017-2019 - ಎಡಿಜಿಪಿ, ರಾಜ್ಯ ಕಾನೂನು ಹಾಗೂ ಸುವ್ಯವಸ್ಥೆ ವಿಭಾಗ
- 2019-2020 - ಎಡಿಜಿಪಿ, ರಾಜ್ಯ ಗುಪ್ತವಾರ್ತೆ
- 2020-2022 - ಬೆಂಗಳೂರು ನಗರ ಪೊಲೀಸ್ ಕಮೀಷನರ್
- 2022ರಿಂದ ಇಲ್ಲಿಯವರೆಗೆ ಡಿಜಿಪಿಯಾಗಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: SSC ನೇಮಕಾತಿ: 8,326 ಹವಾಲ್ದಾರ್, ಎಂಟಿಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - SSC Recruitment