ಮೈಸೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ದರ್ಶನ ಪಡೆಯಲು ನೂರಾರು ಭಕ್ತರು ಮೈಸೂರಿನಿಂದ ಭಾನುವಾರ ತೆರಳಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದಲ್ಲಿ ಬಾಲರಾಮನ ದರ್ಶನ ಪಡೆಯಬೇಕು ಎನ್ನುವ ಉದ್ದೇಶದೊಂದಿಗೆ ದೇಶಾದ್ಯಂತ ಈಗಾಗಲೇ ಅಯೋಧ್ಯೆ ಶ್ರೀರಾಮ ಮಂದಿರ ದರ್ಶನ ಅಭಿಯಾನ ಆರಂಭವಾಗಿದೆ. ಇದರ ಹಿನ್ನೆಲೆ ಮೈಸೂರಿನ ರೈಲ್ವೆ ನಿಲ್ದಾಣದಿಂದ ಬಾಲರಾಮ ದರ್ಶನಕ್ಕೆ ತೆರಳುವ ರೈಲಿಗೆ ಬಾಲರಾಮ ಮೂರ್ತಿ ನಿರ್ಮಿಸಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರು ಚಾಲನೆ ನೀಡಿದರು. ಮೈಸೂರು, ಚಾಮರಾಜನಗರ ಮತ್ತು ಕೊಡಗು ಭಾಗದಿಂದ 1,400 ಮಂದಿ ಮೈಸೂರಿನಿಂದ ಅಯೋಧ್ಯೆಗೆ ಹೊರಟರು. ರಾಮ ಭಕ್ತರಿಗೆ ರೈಲ್ವೆ ನಿಲ್ದಾಣದಲ್ಲಿ ಬೀಳ್ಕೊಡಲಾಯಿತು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಜಗದೀಶ್ ಹೀರೆಮನಿ ಮಾತನಾಡಿ, ಬಾಲರಾಮನ ದರ್ಶನಕ್ಕೆ ಪ್ರತಿ ನಿತ್ಯ ಸುಮಾರು 75 ಸಾವಿರ ಜನರನ್ನು ರೈಲಿನ ಮೂಲಕ ಕಳುಹಿಸಿಕೊಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಒಂದೊಂದು ರಾಜ್ಯಕ್ಕೆ ಒಂದೊಂದು ಬಣ್ಣ ಇರುವ ಟ್ಯಾಗ್ ಮತ್ತು ಬ್ಯಾಡ್ಜ್ಗಳನ್ನು ರೈಲ್ವೆ ಇಲಾಖೆ ನೀಡಿದೆ. ಈಗಾಗಲೇ ರಾಜ್ಯದಿಂದ 5 ರೈಲುಗಳು ಹೋಗಿದೆ. ಸುಮಾರು 8,500 ಜನರು ದರ್ಶನ ಪಡೆದು ವಾಪಸ್ ಬಂದಿದ್ದಾರೆ'' ಎಂದು ಮಾಹಿತಿ ನೀಡಿದರು.
''ಬಾಲರಾಮನ ದರ್ಶನಕ್ಕಾಗಿ ತೆರಳುವ ಭಕ್ತರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಯೋಧ್ಯೆಯಲ್ಲಿ ವಿಶೇಷ ವಸತಿ ಸೌಕರ್ಯ ಒದಗಿಸಲಾಗಿದೆ. ಈ ಅಭಿಯಾನದ ಮೂಲಕ ಸುಮಾರು 35 ಸಾವಿರ ಜನ ಅಯೋಧ್ಯೆಗೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಮಾಡಿರುವುದು 500 ವರ್ಷಗಳವರೆಗೆ ನಡೆದ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ'' ಎಂದು ಹೇಳಿದರು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಮುಡಿಗೇರಿದ ಆರು ಜಾಗತಿಕ ಪ್ರಶಸ್ತಿ ಗರಿ: 8 ತಿಂಗಳಲ್ಲಿ ಅರ್ಧಶತಕಕ್ಕೂ ಹೆಚ್ಚು ಪ್ರಶಸ್ತಿಗಳು