ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆಲ ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಮಳೆಯಿಂದ ಬೆಳೆ ಹಾನಿ ಮತ್ತು ಮುಂಗಾರು ಹಾಗೂ ಹಿಂಗಾರು ಬಿತ್ತನೆ ಸ್ಥಿತಿಗತಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಹಿಂಗಾರು ಮಳೆ ವಾಡಿಕೆಗಿಂತ ಶೇ. 61ರಷ್ಟು ಹೆಚ್ಚಾದ ಕಾರಣ, 7 ಜಿಲ್ಲೆಗಳಲ್ಲಿ ವ್ಯಾಪಕ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ, ಮೂರು ದಿನಗಳಲ್ಲಿ ಹಾನಿಯ ಸಮೀಕ್ಷಾ ವರದಿ ನೀಡಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಲಕ್ಷ ಹೆಕ್ಟೇರ್ಗೂ ಅಧಿಕ ಬೆಳೆ ಹಾನಿ: ರಾಜ್ಯದಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಸಂಭವನೀಯ ಬೆಳೆ ನಷ್ಟದ ಜಂಟಿ ಸಮೀಕ್ಷೆಗೆ ಸೂಚಿಸಿದ್ದಾರೆ.
ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನೈಸರ್ಗಿಕ ವಿಪತ್ತು ಉಸ್ತುವಾರಿ ಸಮಿತಿಗಳಿಗೆ ಜವಾಬ್ದಾರಿ ಒಪ್ಪಿಸಿದ್ದು, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮಿತಿಯಲ್ಲಿರುತ್ತಾರೆ. ಕೃಷಿ ಸಚಿವರ ಕೈಸೇರಿದ ತಾತ್ಕಾಲಿಕ ವರದಿಯಂತೆ 30 ಸಾವಿರ ಎಕರೆ ಪ್ರದೇಶದಲ್ಲಿದ್ದ ಬೆಳೆ ಹಾನಿಗೀಡಾಗಿದೆ. ನೀರಿನಲ್ಲಿ ನಿಂತ ಪ್ರಮಾಣವೂ ಹೆಚ್ಚಿದ್ದು, ಜಂಟಿ ಪರಿಶೀಲನೆ ನಂತರ ವಾಸ್ತವಿಕ ಹಾನಿ ಗೊತ್ತಾಗಲಿದೆ.
ಹತ್ತಿ, ಭತ್ತ, ಮೆಕ್ಕಜೋಳ, ಶೇಂಗಾ, ತೊಗರಿ, ಕಬ್ಬು, ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಹಾನಿಗೀಡಾಗಿದ್ದರೆ, ಬಿತ್ತನೆ ಮಾಡಿರುವುದೂ ಸಹ ಕೊಳೆತುಹೋಗಿದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಕಡಲೆ ಮೊಳಕೆಯೊಡೆದಿಲ್ಲ, ಬಹುತೇಕ ಕಡೆ ಬಿತ್ತನೆ ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಹೊಲ, ಗದ್ದೆ, ತೋಟಗಳು ಜಲಾವೃತವಾಗಿ ಬೆಳೆಗಳು ನಷ್ಟವಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ತಹಶೀಲ್ದಾರ್, ಸಹಾಯಕ ಆಯುಕ್ತರು ವರದಿ ತರಿಸಿಕೊಂಡು ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸೂಚಿಸಿದ್ದಾರೆ.
ಮುಂಗಾರು - ಹಿಂಗಾರು ಬಿತ್ತನೆ ಸ್ಥಿತಿಗತಿ: ಬಿತ್ತನೆ ಹೇಗಿದೆ ಎಂಬುದನ್ನು ನೋಡುವುದಾದರೆ, ಮುಂಗಾರು ಗುರಿ 82.480 ಲಕ್ಷ ಹೆಕ್ಟೇರ್ ಇದ್ದು, ಸೆಪ್ಟೆಂಬರ್ ಅಂತ್ಯಕ್ಕೆ 81.361 ಲಕ್ಷ ಹೆಕ್ಟೇರ್ನಷ್ಟು ಸಾಧನೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ಬಿತ್ತನೆ 74.320 ಲಕ್ಷ ಹೆಕ್ಟೇರ್ನಷ್ಟು ಆಗಿತ್ತು.
ಹಿಂಗಾರು ಗುರಿ 25.331 ಲಕ್ಷ ಹೆಕ್ಟೇರ್ ಆಗಿದ್ದು, ಅಕ್ಟೋಬರ್ 14ರ ವರೆಗೆ ವಾಡಿಕೆ ಬಿತ್ತನೆ 2.878 ಲಕ್ಷ ಹೆಕ್ಟೇರ್ ಆಗಿದೆ. ವಾಸ್ತವಿಕ ಬಿತ್ತನೆ 1.332 ಲಕ್ಷ ಹೆಕ್ಟೇರ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಬಿತ್ತನೆ 2.544 ಲಕ್ಷ ಹೆಕ್ಟೇರ್ ಆಗಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಹಿಂಗಾರು ಮಳೆ ಅನಾಹುತಕ್ಕೆ 25 ಮಂದಿ ಸಾವು; ಅಪಾರ ಪ್ರಮಾಣದ ಬೆಳೆ, ಆಸ್ತಿ ಪಾಸ್ತಿ ಹಾನಿ