ಬೆಂಗಳೂರು: "ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮ ಕುಟುಂಬದ ಸದಸ್ಯರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಿ, ಜೆಡಿಎಸ್ ಪಕ್ಷವನ್ನು ಹೇಗೆ ಕಟ್ಟುತ್ತಾರೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣದ ಜೆಡಿಎಸ್ ನಾಯಕ ಅಕ್ಕೂರುದೊಡ್ಡಿ ಶಿವಣ್ಣ, ಮತ್ತಿತರರ ನಾಯಕರು ಹಾಗೂ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಶಿವಕುಮಾರ್, "ದೇವೇಗೌಡರು ಪಕ್ಷದ ಅಧಿಕಾರವನ್ನು ಕುಮಾರಸ್ವಾಮಿ ಅವರಿಗೆ ಕೊಟ್ಟ ಪರಿಣಾಮ ಆ ಪಕ್ಷ ಈ ಸ್ಥಿತಿಗೆ ಬಂದು ತಲುಪಿದೆ'' ಎಂದರು.
''ಈಗ ತಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿದವರನ್ನೇ ಕರೆದುಕೊಂಡು ಒಕ್ಕಲಿಗರ ಮಠಕ್ಕೆ ಹೋಗಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಕಾರ್ಯಕರ್ತರಿಗೆ ಒಂದು ಸಣ್ಣ ಅಧಿಕಾರವನ್ನಾದರೂ ಕೊಟ್ಟರಾ? ಅಧಿಕಾರ ಇದ್ದಾಗಲೇ ಏನು ಮಾಡಲಿಲ್ಲ. ಕಾರ್ಯಕರ್ತರು ಇಲ್ಲದೇ ಯಾವ ಪಕ್ಷ ಇರಲು ಸಾಧ್ಯ?'' ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಒಬ್ಬರಿಗೊಬ್ಬರು ರಾಜಕೀಯವಾಗಿ ಒಂದು ಗತಿ ಕಾಣಿಸುತ್ತಾರೆ: ''ಚನ್ನಪಟ್ಟಣದವರಿಗೆ ರಾಜಕಾರಣ ಹೊಸದಲ್ಲ. ಆದರೆ, ಇಂದು ನಡೆಯುತ್ತಿರುವ ರಾಜಕಾರಣ ನೋಡಿದರೆ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂದು ಅರ್ಥವಾಗುತ್ತಿಲ್ಲ. ಕುಮಾರಸ್ವಾಮಿ, ಯೋಗೇಶ್ವರ್ ಅವರು ಆಡಿದ್ದ ಮಾತುಗಳು ಒಂದೇ, ಎರಡೇ. ಅವರು ಈಗ ಏನಾದರೂ ಮಾಡಿಕೊಳ್ಳಲಿ. ಚನ್ನಪಟ್ಟಣದಲ್ಲಿ ದಳ ಮತ್ತು ಬಿಜೆಪಿ ಒಂದಾಗಲು ಸಾಧ್ಯವೇ?'' ಎಂದರು.
''ಚುನಾವಣೆ ಮುಗಿಯುವ ವೇಳೆಗೆ ಕಾಂಗ್ರೆಸ್ನವರಿಗೆ ಏನೂ ಮಾಡದೇ ಇದ್ದರೂ, ಪರಸ್ಪರ ಒಬ್ಬರಿಗೊಬ್ಬರು ಯಾವ ಗತಿ ಮಾಡಬೇಕೋ ಮಾಡುತ್ತಾರೆ. ಇವರ ರಾಜಕೀಯಕ್ಕೆ ಸ್ವಾರ್ಥಕ್ಕೆ ಕಾರ್ಯಕರ್ತರು ಏನಾಗಬೇಕು. ಅವರು ಯಾರಿಗಾಗಿ ದುಡಿದರು, ಹೋರಾಟ ಮಾಡಿದರು? ಕಳೆದ ಒಂದು ತಿಂಗಳಲ್ಲಿ ಸುಮಾರು 10 ಸಾವಿರ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ'' ಎಂದು ತಿಳಿಸಿದರು.
ಎಲ್ಲ ಕ್ಷೇತ್ರದಲ್ಲೂ ನಮಗೆ ಮುನ್ನಡೆ: ''ಪ್ರತಿ ಬಾರಿ ಹಿನ್ನಡೆಯಾಗುತ್ತಿದ್ದ ಬೆಂಗಳೂರು ದಕ್ಷಿಣದಲ್ಲೂ ಈ ಬಾರಿ ನಮಗೆ ಮುನ್ನಡೆ ಸಿಗುತ್ತಿದೆ. ಅದರ ಜೊತೆ ರಾಜರಾಜೇಶ್ವರಿನಗರ, ಆನೇಕಲ್ನಲ್ಲೂ ನಮಗೆ ಲೀಡ್ ಬರಲಿದೆ. ಎಲ್ಲೂ ಮೋದಿ ಗಾಳಿ ಇಲ್ಲ. ಕುಮಾರಸ್ವಾಮಿ ಅವರು ದೆಹಲಿಯಿಂದ ಒಂದು ದಿನ ಬಂದು ಬಿಜೆಪಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದರು. ಮರುದಿನ ನನ್ನ ಮೇಲೆ ಟೀಕೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯವರು ಸಿಎಂ ಆಗಲಿ ಎಂದು ಬೆಂಬಲ ನೀಡಿದರೆ, ನಾನೇ ವಿಷ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ನಮ್ಮ ಕಾರ್ಯಕರ್ತರ ವಿರೋಧದ ನಡುವೆ ಅವರಿಗೆ ಬೆಂಬಲ ಕೊಟ್ಟಿದ್ದೆ'' ಎಂದರು.
''ಈ ಚುನಾವಣೆಯನ್ನು ದೇಶವೇ ನೋಡುತ್ತಿದೆ. ಆದರೂ, ನೀವು ತಲೆ ಕೆಡಿಸಿಕೊಳ್ಳಬೇಡಿ. 2013ರಲ್ಲಿ ಉಪಚುನಾವಣೆ ಎದುರಾದಾಗ ನಾನು ಮಂತ್ರಿಯಾಗಿರಲಿಲ್ಲ. ಆಗ ನಮ್ಮ ಕೇವಲ 3 ಶಾಸಕರೂ ಇದ್ದರೂ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಸ್ಪರ್ಧೆ ಮಾಡಿದಾಗ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದರು. ಅವರಿಬ್ಬರೂ ಸೇರಿ 2.50 ಲಕ್ಷ ಮತಗಳ ಮುನ್ನಡೆಯಲ್ಲಿದ್ದರು. ಆದರೂ ಸುರೇಶ್ 1.50 ಲಕ್ಷ ಮತಗಳ ಅಂತರದಿಂದ ಗೆದ್ದರು. ಇಂದೂ ಅದೇ ಪರಿಸ್ಥಿತಿ ಇದೆ'' ಎಂದು ಡಿಕೆಶಿ ಹೇಳಿದರು.
ರಾಮನಗರದ ಮೇಲೆ ನಂಬಿಕೆ ಇಲ್ಲದೇ ಮಂಡ್ಯದತ್ತ: ''ಈಗ ರಾಮನಗರದಲ್ಲಿ ನಂಬಿಕೆ ಇಲ್ಲದೆ, ಮಂಡ್ಯಕ್ಕೆ ಹೋಗಿ ಸ್ಪರ್ಧೆ ಮಾಡುತ್ತಿದ್ದಾರೆ. ನಿಮ್ಮ ಊರಲ್ಲಿ ನಿನಗೆ ನಂಬಿಕೆ ಇಲ್ಲದಿದ್ದರೆ, ಬೇರೆ ಊರಲ್ಲಿ ಹೋಗಿ ನಿಂತು ಏನು ಮಾಡುತ್ತೀರಿ? ನನ್ನ ಪ್ರಕಾರ ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಹಾಸನ ಈ ನಾಲ್ಕು ಕ್ಷೇತ್ರಗಳಲ್ಲಿಯೂ ಅವರು ಗೆಲ್ಲುವುದಿಲ್ಲ. ನೀವು ಚನ್ನಪಟ್ಟಣದಲ್ಲಿ ಒಂದು ಮತ ಲೀಡ್ ಕೊಡಿ ಸಾಕು. ಯೋಗೇಶ್ವರ್ಗೆ ಏನು ಮಾಡಬೇಕೋ ಅದನ್ನು ಕುಮಾರಸ್ವಾಮಿ ಮಾಡುತ್ತಾರೆ. ಅವರಿಗೆ ಮೊದಲ ಬಲಿ ಯೋಗೇಶ್ವರ್. ಯೋಗೇಶ್ವರ್ ಕೂಡ ಕಮ್ಮಿ ಇಲ್ಲ. ಅವರು ಮಾಡಿರುವ ಕರ್ಮಗಳು ವಿಪರೀತ ಇವೆ. ಚುನಾವಣೆ ಮುಗಿಯಲಿ ಅಂತಾ ಸುಮ್ಮನೆ ಇದ್ದೇನೆ'' ಎಂದು ವಾಗ್ದಾಳಿ ನಡೆಸಿದರು.
ನಮ್ಮ ಯೋಜನೆಗಳೇ ನಿಮ್ಮ ಶಕ್ತಿ: ''ನಮ್ಮನ್ನು ನಂಬಿ ಬಿಜೆಪಿ - ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದೀರಿ. ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಿ. ನಮ್ಮ ಗ್ಯಾರಂಟಿ ಯೋಜನೆಗಳೇ ನಿಮಗೆ ದೊಡ್ಡ ಶಕ್ತಿ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ, ಯುವಕರಿಗೆ ವಾರ್ಷಿಕ 1 ಲಕ್ಷ ರೂ. ಶಿಷ್ಯ ವೇತನ, 25 ಲಕ್ಷ ರೂ.ವರೆಗೂ ಆರೋಗ್ಯ ವಿಮೆ ಸೇರಿದಂತೆ ರೈತರು ಹಾಗೂ ಕಾರ್ಮಿಕರಿಗೆ ಅನೇಕ ಯೋಜನೆ ನೀಡಿದ್ದೇವೆ'' ಎಂದು ಶಿವಕುಮಾರ್ ವಿವರಿಸಿದರು.
''ಮುಂದಿನ ದಿನಗಳಲ್ಲಿ ಬೇರೆ ಕಡೆಗಳಲ್ಲಿ ಪ್ರವಾಸ ಮಾಡಬೇಕು. ನೀವೇ ಚನ್ನಪಟ್ಟಣದಲ್ಲಿ ಚುನಾವಣೆ ಮಾಡಬೇಕು. ಕೆಲ ದಿನಗಳಲ್ಲಿ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತೇನೆ. ನೀವೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಿ. ಇನ್ನು ಯಾರೆಲ್ಲಾ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಹೇಳಿ, ಸೇರಿಸಿಕೊಳ್ಳೋಣ. ಇಂದು ಶಿವಣ್ಣ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಎಲ್ಲರಿಗೂ ಆತ್ಮೀಯವಾಗಿ ಸ್ವಾಗತ ಕೋರುತ್ತೇನೆ'' ಎಂದರು.
ಇದನ್ನೂ ಓದಿ: ಸಿ.ಟಿ.ರವಿಗೆ ತುಂಬಾ ಅನ್ಯಾಯವಾಗಿದೆ: ಬಿ.ಎಸ್.ಯಡಿಯೂರಪ್ಪ - B S Yediyurappa