ಮಂಗಳೂರು: ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೀಪಾವಳಿಯನ್ನು ಕಾಲ ಬದಲಾದಂತೆ ಆಚರಿಸುವ ವಿಧಾನಗಳು ಬದಲಾಗುತ್ತಿವೆ. ಇದರಲ್ಲಿ ಗೂಡುದೀಪಗಳು ಕೂಡ ಒಂದು. ಹಿಂದಿನ ಕಾಲದಲ್ಲಿ ಇದ್ದ ಗೂಡುದೀಪಗಳ ಸಂಸ್ಕೃತಿಯನ್ನು ನೆನಪಿಸುವ ಸ್ಪರ್ಧೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ಬಗೆ ಬಗೆಯ ಗೂಡುದೀಪಗಳು ಗಮನಸೆಳೆದವು.
ನಮ್ಮಕುಡ್ಲ ವತಿಯಿಂದ ಪ್ರತೀ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಲ್ಪಡುವ ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದಿದೆ. ಸಾಂಪ್ರದಾಯಿಕ, ಆಧುನಿಕ ಮತ್ತು ಮಾಡೆಲ್ ಹೀಗೆ ಮೂರು ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ನಡೆಯಿತು.
ಮಂಗಳೂರಿನಲ್ಲಿ 20 ವರ್ಷಗಳ ಹಿಂದೆ ಗೂಡುದೀಪ ಸ್ಪರ್ಧೆ ಒಂದು ವಿಭಾಗದಲ್ಲಿ ಒಂದು ಪವನ್ ಬಂಗಾರದ ಪದಕವನ್ನು ನೀಡುವ ಮೂಲಕ ಶುರುವಾಗಿತ್ತು. ಈ ಸ್ಪರ್ಧೆ ಇದೀಗ ಮೂರು ವಿಭಾಗಳಲ್ಲಿ ನಡೆಯುತ್ತಿದೆ. ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆಯುವ ವಿಜೇತರಿಗೆ ಬಂಗಾರದ ಪದಕ ಹಾಗೂ ತೃತೀಯ ಸ್ಥಾನ ವಿಜೇತರಿಗೆ ಬೆಳ್ಳಿ ಪದಕ ಮಾತ್ರವಲ್ಲದೇ ನೆನಪಿನ ಕಾಣಿಕೆ ನೀಡಲಾಗುತ್ತಿದೆ.
ಹಿಂದಿನ ಕಾಲದಲ್ಲಿ ದೀಪಾವಳಿ ಸಂದರ್ಭದಲ್ಲಿ ಮನೆಯವರು ಒಟ್ಟು ಸೇರಿ ಗೂಡುದೀಪಗಳನ್ನು ತಯಾರಿಸಿ, ಮನೆಗಳಲ್ಲಿ ನೇತು ಹಾಕುತ್ತಿದ್ದರು. ಬೇರೆ ಬೇರೆ ಪರಿಕರಗಳನ್ನು ಬಳಸಿ ಗೂಡುದೀಪಗಳನ್ನು ರಚಿಸಿ ದೀಪಾವಳಿ ಹಬ್ಬದ ಮೂರು ದಿನ ಮನೆಯ ಎದುರು ನೇತುಹಾಕಿ ಬೆಳಗುತ್ತಿದ್ದರು. ಆದರೆ ಕಾಲ ಬದಲಾದಂತೆ ಮನೆಯಲ್ಲಿ ಗೂಡುದೀಪ ರಚಿಸದೆ ಅಂಗಡಿಗಳಲ್ಲಿ ಸಿಗುವ ರೆಡಿಮೇಡ್ ಗೂಡುದೀಪಗಳನ್ನು ಖರೀದಿಸಿ ಬೆಳಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಹೆಚ್ಚು ಗಮನಸೆಳೆಯುತ್ತಿದೆ.
ಮೂರು ವಿಭಾಗದಲ್ಲಿ ಗಮನಸೆಳೆದ ಗೂಡುದೀಪಗಳು; ಈ ಬಾರಿ ಮೂರು ವಿಭಾಗದಲ್ಲಿ 600ಕ್ಕೂ ಅಧಿಕ ಗೂಡುದೀಪಗಳು ಸ್ಪರ್ಧೆಗೆ ಬಂದಿದ್ದವು. ಸಾಂಪ್ರದಾಯಿಕ ವಿಭಾಗದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಗೂಡುದೀಪಗಳು ರಚನೆಯಾಗಿವೆ. ಬಲಿಯೇಂದ್ರನನ್ನು ಬಿಂಬಿಸುವ ಗೂಡುದೀಪಗಳು ಸೇರಿದಂತೆ ಈ ವಿಭಾಗದಲ್ಲಿ ಹಲವು ಗೂಡುದೀಪಗಳು ಗಮನಸೆಳೆದಿವೆ. ಇನ್ನು ಆಧುನಿಕ ವಿಭಾಗದಲ್ಲಿ ಬೇರೆ ಬೇರೆ ವಸ್ತುಗಳನ್ನು ಬಳಸಿ ಮಾಡಲಾದ ಗೂಡುದೀಪಗಳು ಗಮನ ಸೆಳೆಯುತ್ತಿವೆ.
ಈ ಬಗ್ಗೆ ಮಾತನಾಡಿದ ನಮ್ಮ ಕುಡ್ಲ ಸಂಸ್ಥೆ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಮಾತನಾಡಿ, "25 ವರ್ಷಗಳಿಂದ ಈ ಸ್ಪರ್ಧೆ ಮಾಡುತ್ತಿದ್ದೇವೆ. ಈಗ ಮನೆಮನೆಯಲ್ಲಿ ಗೂಡುದೀಪ ರಚಿಸುವ ಕಲ್ಪನೆ ಹೋಗಿದೆ. ಈಗ ಅಂಗಡಿಯಿಂದ ತಂದು ಗೂಡುದೀಪ ಬೆಳಗುತ್ತಾರೆ. ಅದಕ್ಕಾಗಿ ಇದನ್ನು ಆರಂಭಿಸಿದ್ದೇನೆ. ದೀಪಾವಳಿ ಹಬ್ಬದಲ್ಲಿ ನಾವೇ ರಚಿಸಿದರೆ ಹೇಗೆ ಬರುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಆರಂಭಿಸಲಾಗಿದೆ" ಎಂದರು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಆದಿತ್ಯ ಮಾತನಾಡಿ, "ನಾನು ಕೆಲವು ವರ್ಷಗಳಿಂದ ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇವೆ. ಈ ಬಾರಿಯ ಗೂಡುದೀಪ ರಚನೆಗೆ 11 ತಿಂಗಳ ತಯಾರಿ ಆಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: 500 ವರ್ಷಗಳ ನಂತರ ರಾಮಭಕ್ತರ ಅಸಂಖ್ಯಾತ ತ್ಯಾಗ, ತಪಸ್ಸಿನೊಂದಿಗೆ ಬಂದಿರುವ ಮಂಗಳಕರ ಕ್ಷಣ: ಪಿಎಂ ಮೋದಿ