ಬೆಂಗಳೂರು: ಬೆಂಗಳೂರು - ಮೈಸೂರು ಎಕ್ಸ್ಪ್ರೇಸ್ ವೇಯಿಂದ ಪ್ರಯಾಣದ ಅವಧಿ ಕಡಿಮೆಯಾಗಿತು. ಆದರೆ ಸಂಚಾರ ನಿಯಮಗಳ ಉಲ್ಲಂಘನೆ, ಅತಿವೇಗದ ಚಾಲನೆಗಳಿಂದ ಅಪಘಾತಗಳ ತಾಣವಾಗಿ ಬದಲಾಗಿತ್ತು. ಬೆಂಗಳೂರು- ಮೈಸೂರು ಎಕ್ಸ್ಪ್ರೇಸ್ ವೇ ವಾಹನ ಸವಾರರ ಪಾಲಿಗೆ ಮೃತ್ಯು ಕೂಪವಾಗಿತ್ತು. ಇದೀಗ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಹೆದ್ದಾರಿಯ ಬದಿಯಲ್ಲಿ ಕ್ಯಾಮರಾಗಳ ಅಳವಡಿಕೆಯಿಂದ ಅಪಘಾತಗಳ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಡೆತ್ ಫ್ರೀ ಝೋನ್ ಆಗಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಬೆಂಗಳೂರು- ಮೈಸೂರು ಎಕ್ಸ್ಪ್ರೇಸ್ ವೇ ಪ್ರಾರಂಭ ಸಮಯದಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಿತ್ತು. ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಮತ್ತು ಲೋಕಸಭಾ ಚುನಾವಣಾ ಕಾರಣಕ್ಕೆ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿತ್ತು. ರಸ್ತೆ ಅಪಘಾತಗಳ ಕುರಿತು ಗಂಭೀರವಾಗಿ ಯೋಚಿಸಿದ ಪೊಲೀಸ್ ಇಲಾಖೆ ಹೆದ್ದಾರಿಯಲ್ಲಿನ ಲೋಪದೋಷಗಳ ಬಗ್ಗೆ ಅಧ್ಯಯನಕ್ಕೆ ಮುಂದಾಗಿತ್ತು.
ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮೈಸೂರು - ಹೆದ್ದಾರಿಯಲ್ಲಿ ನಡೆಯುವ ಅಫಘಾತಗಳಿಗೆ ಕಾರಣಗಳ ಬಗ್ಗೆ ಪರಿಶೀಲನೆ ನಡೆಸಿದರು. ಅಪಘಾತಗಳಿಗೆ ಕಡಿವಾಣ ಹಾಕಲು ಮುಂದಾದ ಅವರು ರಸ್ತೆಯ ಬದಿಗಳಲ್ಲಿ ಕ್ಯಾಮರಾ ಅಳವಡಿಕೆಗೆ ಮುಂದಾದರು. ಕಳೆದ 28 ದಿನಗಳಲ್ಲಿ 74 ಸಾವಿರಕ್ಕೂ ಹೆಚ್ಚು ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಕ್ಯಾಮರಾ ಸೆರೆ ಹಿಡಿದಿತ್ತು.
ಕಾರು ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದು, ಅತಿವೇಗ ಮತ್ತು ಲೇನ್ ಉಲ್ಲಂಘನೆಗಳು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸೇರಿದಂತೆ ಭಾರಿ ಸರಕು ವಾಹನಗಳು ಕೂಡ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳು ಪತ್ತೆಯಾಗಿತ್ತು. ಪ್ರಮುಖವಾಗಿ ಚಾಲಕರ ನಿರ್ಲಕ್ಷ್ಯ ಕಂಡು ಬಂದಿತ್ತು. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ಎಲ್ಲರಿಗೂ ಆನ್ಲೈನ್ ಮೂಲಕವೇ ನೋಟಿಸ್ ಜಾರಿ ಮಾಡಲಾಗಿತ್ತು.
ಸಂಚಾರ ನಿಯಮಗಳ ಉಲ್ಲಂಘನೆಗೆ ನೋಟಿಸ್ ಬಂದು, ದಂಡ ಪಾವತಿಸಿದ ನಂತರ ಬುದ್ಧಿ ಕಲಿತಿರುವ ವಾಹನ ಸವಾರರು ಸಂಚಾರ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇದರಿಂದ ಸಹಜವಾಗಿ ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಅಂಕಿ - ಅಂಶಗಳ ಮಾಹಿತಿಯನ್ನು ಹಂಚಿಕೊಂಡಿರುವ ಎಡಿಜಿಪಿ ಅಲೋಕ್ ಕುಮಾರ್ ಬೆಂಗಳೂರು ಮೈಸೂರು ಹೆದ್ದಾರಿಯನ್ನು ಡೆತ್ ಫ್ರೀ ಝೋನ್ ಆಗಿ ಮಾಡಲು ಶ್ರಮಿಸೋಣ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
2023ರ ಜನವರಿ-ಮೇ ವರೆಗೆ 288 ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿದ್ದು, ಇದರಲ್ಲಿ 100 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು 301 ಜನರು ಗಾಯಗೊಂಡಿದ್ದಾರೆ. ಹಾಗೆಯೇ 2024ರ ಜನವರಿ-ಮೇ ವರೆಗೆ 125 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 31 ಜನರು ಪ್ರಾಣ ಕಳೆಕೊಂಡಿದ್ದಾರೆ. ಮತ್ತು 167 ಮಂದಿ ಗಾಯಗೊಂಡಿದ್ದಾರೆ. ಮೇಲಿನ ಅಂಕಿ ಅಂಶಗಳ ಪ್ರಕಾರ ಬೆಂಗಳೂರು-ಮೈಸೂರು ಎಕ್ಸ್ಪ್ರೇಸ್ ವೇನಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ.
ಇದನ್ನೂ ಓದಿ: ಮೈಸೂರು-ಬೆಂಗಳೂರು ಹೈವೇ: ಕಳೆದ 15 ದಿನಗಳಲ್ಲಿ 12,192 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲು - Traffic Violation Cases