ಕಾರವಾರ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾದ ಬೆನ್ನಲ್ಲೇ ಇದೀಗ ಕಡಲಿನಲ್ಲಿಯೂ ಮತ್ಸ್ಯಕ್ಕೆ ಬರ ಎದುರಾಗಿದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುತ್ತಿದ್ದ ಬಹುತೇಕ ಬೋಟ್ಗಳು ಮೀನಿಲ್ಲದೇ ಬರಿಗೈಯಲ್ಲಿ ಮರಳುತ್ತಿವೆ. ಇದರಿಂದ ಬೋಟ್ಗಳನ್ನು ಲಂಗರು ಹಾಕತೊಡಗಿದ್ದು, ಮೀನಿನ ದರದಲ್ಲೂ ಏರಿಕೆ ಕಾಣುವಂತಾಗಿದೆ.
ಹೌದು.. ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ನಿರೀಕ್ಷೆಯಂತೆ ಸರಿಯಾಗಿ ಸಮಯಕ್ಕೆ ಆರಂಭವಾಗಿದ್ದರೂ, ಬಹುತೇಕರು ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದರು. ಆದರೆ, ಇದೀಗ ಮೀನುಗಾರಿಕಾ ಹಂಗಾಮು ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಕೂಡ ಮೀನುಗಾರಿಕೆ ಚೇತರಿಸಿಕೊಂಡಿಲ್ಲ. ಮೀನುಗಾರಿಕೆಗೆ ತೆರಳಿದ ಬೋಟ್‌ಗಳಿಗೆ ಲಾಭಕ್ಕಿಂತ ಖರ್ಚು ಹೆಚ್ಚಾಗಿದೆ. ಇದೇ ಕಾರಣಕ್ಕೆ ಮೀನುಗಾರಿಕೆ ಬಂದ್ ಮಾಡಲಾಗುತ್ತಿದೆ.
ಬೋಟ್ಗಳನ್ನು ಬಂದರುಗಳಲ್ಲಿ ಲಂಗರು ಹಾಕಲಾಗುತ್ತಿದೆ. ರಾಜ್ಯದಲ್ಲಿ ಕೃಷಿ ಕ್ಷೇತ್ರ ಬರದಿಂದ ತತ್ತರಿಸಿದಂತೆ ಇದೀಗ ಮೀನುಗಾರಿಕಾ ಕ್ಷೇತ್ರ ಕೂಡ ಮೀನಿಲ್ಲದೇ ಮತ್ಸ್ಯ ಕ್ಷಾಮ ಎದುರಿಸುತ್ತಿದೆ. ಕಳೆದ ವರ್ಷ ಉತ್ತಮ ಮೀನುಗಾರಿಕೆ ನಡೆಸಿದ್ದ ಪರ್ಶಿಯನ್ ಬೋಟ್‌ಗಳಿಗೂ ಕೂಡ ಇದೀಗ ಮೀನು ಸಿಗದಂತಾಗಿದೆ.
ಇದರಿಂದ ಬಹುತೇಕರು ಬಂದರುಗಳಲ್ಲಿ ಬೋಟ್ ಲಂಗರು ಹಾಕುತ್ತಿದ್ದಾರೆ. ಲಂಗರು ಹಾಕಿದ ಬೋಟ್ ರೀಪೇರಿ ಬಲೇ ಜೋಪಾನ ಮಾಡುತ್ತಿದ್ದು, ಖಾಲಿ ಇರುವ ಕಾರ್ಮಿಕರಿಗೆ ಕೂಲಿ ಪಾವತಿ ಮಾಡುವುದಕ್ಕೂ ಮಾಲೀಕರು ಸಂಕಷ್ಟ ಎದುರಿಸಬೇಕಾಗಿದೆ ಎನ್ನುತ್ತಾರೆ ಮೀನುಗಾರರು.
ಇನ್ನು ಬಹುತೇಕ ಮೀನುಗಾರರು ಸಾಲ ಮಾಡಿಕೊಂಡಿದ್ದು, ಸಾಲ ತುಂಬಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಾರ್ಚ್ ಅಂತ್ಯವಾಗಿರುವುದರಿಂದ ಬ್ಯಾಂಕ್ನವರು ನಿತ್ಯವೂ ಕರೆ ಮಾಡುತ್ತಿದ್ದಾರೆ. ಮೀನುಗಾರರು ಮತ್ತೆ ಸಾಲ ಕೇಳಿದರೇ ಬ್ಯಾಂಕ್‌ಗಳು ನೀಡುತ್ತಿಲ್ಲ. ಸಿಆರ್‌ಜೆಡ್ ವ್ಯಾಪ್ತಿ ಬಹುತೇಕ ಮೀನುಗಾರರ ಮನೆ ಇರುವ ಕಾರಣ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಅಲ್ಲದೇ ಕೃಷಿ ಕ್ಷೇತ್ರವನ್ನು ಬರ ಎಂದು ಘೋಷಣೆ ಮಾಡಿದಂತೆ ಮೀನುಗಾರಿಕಾ ಕ್ಷೇತ್ರದಲ್ಲಿಯೂ ಎದುರಾಗಿರುವ ಬರಕ್ಕೆ ಪರಿಹಾರವಾಗಿ ಮೀನುಗಾರರ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.
ಜನವರಿಯಿಂದ ಬಹಳ ಮೀನು ಕಡಿಮೆ ಆಗಿದೆ: ಹಿಂದಿನ ವರ್ಷ ಜನವರಿಯಿಂದ ಲಾಸ್ಟ್ ಅವಧಿ ವರೆಗೆ ಬಹಳಷ್ಟು ಮೀನು ಇತ್ತು. ಈ ಸಲ ಜನವರಿಯಿಂದ ಬಹಳ ಮೀನು ಕಡಿಮೆ ಆಗಿದೆ. ಹಾಗಾಗಿ ಎರಡು ದಿನ ಮೂರು ದಿನದಲ್ಲಿ ಮೀನು ತುಂಬಿಕೊಂಡು ವಾಪಸ್ ಬರುವ ಬೋಟ್ಗಳು, ಈಗ ಹತ್ತು ದಿನವಾದರೂ ಇಪ್ಪುತ್ತು ನಾಲ್ವತ್ತು ಬಾಕ್ಸ್ನಷ್ಟು ಮೀನು ಸಿಗುತ್ತಿಲ್ಲ.
ಹೀಗಾಗಿ ಸುಮಾರು ಬೋಟ್ಗಳು ಮೀನುಗಾರಿಕೆ ನಿಲ್ಲಿಸಿವೆ.ಈ ಸಲ ಬಹಳಷ್ಟು ಕಷ್ಟದಲ್ಲಿದ್ದೇವೆ. ಅದನ್ನು ನಂಬಿಕೊಂಡು ಕೆಲಸ ಮಾಡುವವರು ಸಹ ಕಷ್ಟದಲ್ಲಿದ್ದಾರೆ. ನೂರರಲ್ಲಿ ಶೇ 75ರಷ್ಟು ಬೋಟ್ಗಳು ಬಂದ್ ಆಗಿವೆ. ಆಗಸ್ಟ್ ತನಕ ಈಗ ನಾಲ್ಕೈದು ಬೋಟ್ ನಡೆಯುತ್ತಿವೆ. ಬೋಟ್ ಮಾಲೀಕರು ತುಂಬಾ ಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಏನಾದರೂ ಸಹಾಯ ಮಾಡಬೇಕೆಂದು ಮೀನುಗಾರ ಸಂತೋಷ ಮನವಿ ಮಾಡಿದ್ದಾರೆ.
ಒಟ್ಟಾರೆ ಕೃಷಿ ಕ್ಷೇತ್ರದಂತೆ ಮೀನುಗಾರಿಕೆ ಕ್ಷೇತ್ರ ಕೂಡ ಬರದಿಂದಾಗಿ ತತ್ತರಿಸಿದೆ. ಮೀನುಗಾರರು ಬೋಟ್ ನಡೆಸಲು ಆಗದೇ ಬಂದರುಗಳಲ್ಲಿ ಲಂಗರು ಹಾಕ ತೊಡಗಿವೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಕೃಷಿಕರಂತೆ ಮೀನುಗಾರಿಕಾ ಕ್ಷೇತ್ರವನ್ನು ಮತ್ಸ್ಯಕ್ಷಾಮ ಎಂದು ಘೋಷಣೆ ಮಾಡಿ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದರು.
ಇದನ್ನೂಓದಿ:ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲಿ ಕಾವೇರಿ ನೀರಿನ ಬಳಕೆ ನಿಲ್ಲಬೇಕಿದೆ: ರಾಘವೇಂದ್ರ