ಚಿಕ್ಕೋಡಿ: ರಾಜಕೀಯ ಕ್ಷೇತ್ರದಲ್ಲಿ ಅನುಭವ ಕಾಲಾನುಕ್ರಮವಾಗಿ ಬರುತ್ತದೆ. ಪ್ರಿಯಾಂಕಾ ಜಾರಕಿಹೊಳಿ ಅವರ ಮನೆಯಲ್ಲಿ ರಾಜಕೀಯ ನಾಯಕರು ಇರುವಾಗ ರಾಜಕೀಯ ಅನುಭವದ ಕೊರತೆ ಕಾಣುವುದಿಲ್ಲ. ಅದೇ ರೀತಿಯಾಗಿ ಮೀನಿನ ಮರಿಗೆ ಈಜು ಕಲಿಸುವುದು ಅಗತ್ಯವಿಲ್ಲ ಎಂದು ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಕಾಗೆ ಹೇಳಿದರು.
ಲೋಕಸಭಾ ಕ್ಷೇತ್ರಕ್ಕೆ ಪ್ರಿಯಾಂಕಾ ಜಾರಕಿಹೊಳಿ ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಸ್ಪರ್ಧೆ ಮತ್ತು ಅನುಭವದ ಕೊರತೆ ಎಂಬ ವಿಚಾರವಾಗಿ ಅವರು ಬುಧವಾರ ಉಗಾರ ಗ್ರಾಮದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜಕಾರಣದಲ್ಲಿ ಸಣ್ಣ ವಯಸ್ಸು, ದೊಡ್ಡ ವಯಸ್ಸು ಎಂಬ ಚರ್ಚೆ ಅಪ್ರಸ್ತುತ. ಪ್ರಿಯಾಂಕಾ ಅವರ ಕುಟುಂಬದಲ್ಲಿ ಹಲವಾರು ಜನ ರಾಜಕೀಯ ಕ್ಷೇತ್ರದಲ್ಲಿ ಇರುವುದರಿಂದ ಅನುಭವ ಕೊರತೆ ಮತ್ತು ಚಿಕ್ಕ ವಯಸ್ಸು ಎಂದು ಹೇಳುವುದಕ್ಕೆ ಬರುವುದಿಲ್ಲ ಎಂದರು.
ಮೀನಿನ ಮರಿಗೆ ಈಜು ಕಲಿಸುವುದಕ್ಕೆ ಆಗೋದಿಲ್ಲ: ಮೀನಿನ ಮರಿಗೆ ಈಜು ಕಲಿಸುವುದಕ್ಕೆ ಆಗೋದಿಲ್ಲ. ಅದೇ ತರನಾಗಿ ಪ್ರಿಯಾಂಕಾ ಜಾರಕಿಹೊಳಿ ಅವರು ಕೂಡ ಇದ್ದಾರೆ. ನಾವು ಕೂಡ ಮೊದಲಿಗೆ ರಾಜಕೀಯಕ್ಕೆ ಬಂದಾಗ ನಮಗೂ ಕೂಡ ಮಾತನಾಡಕ್ಕೆ ಬರುತ್ತಿರಲಿಲ್ಲ. ನಾವು ಕಾಲಾನುಕ್ರಮವಾಗಿ ಪ್ರಭುತ್ವ ಸಾಧಿಸಿದ್ದೇನೆ. ನಾವು ಹಿರಿಯರು ಆಗಿದ್ದರಿಂದ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾ ಅವರನ್ನು ಉತ್ತುಂಗ ಸ್ಥಾನಕ್ಕೆ ಕರೆದುಕೊಂಡು ಹೋಗಿ ದೇಶ ಸೇವೆ ಮಾಡುವಂತೆ ಮಾರ್ಗದರ್ಶನ ನೀಡುತ್ತೇವೆ ಎಂದು ಶಾಸಕ ಕಾಗೆ ಹೇಳಿದರು.
ಪ್ರಿಯಾಂಕಾ ಜಾರಕಿಹೊಳಿಯವರ ಅವರಿಗೆ ಮಾರ್ಗದರ್ಶಕರಾಗಿ ಶಾಸಕ ಲಕ್ಷ್ಮಣ್ ಸವದಿ, ನಾನು, ಪ್ರಕಾಶ್ ಹುಕ್ಕೇರಿ ಮಾರ್ಗದರ್ಶನ ನೀಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ ಸಾರ್ವಜನಿಕ ಸೇವೆಗೆ ಯುವಕರು ತೊಡಗಿಸಿಕೊಳ್ಳುವಂತೆ ಜವಾಬ್ದಾರಿ ವಹಿಸುತ್ತೇವೆ ಎಂದು ಹೇಳಿದರು.
ಮೋದಿ ಅಲೆ ಮುಂದೆ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತವೆಯಾ ಎಂಬ ವಿಚಾರವಾಗಿ ಮಾತನಾಡಿ, ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು, ಪ್ರತಿಕ್ಷಣವೂ ಕೂಡ ಬದಲಾವಣೆಯಾಗುತ್ತದೆ. ಇವತ್ತು ಇದ್ದಿದ್ದು ನಾಳೆ ಇರುವುದಿಲ್ಲ, ಪ್ರತಿ ದಿನವೂ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ಅಭ್ಯರ್ಥಿ ಅಣ್ಣಸಾಹೇಬ್ ಜೊಲ್ಲೆ ಅವರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಶಾಸಕ ಕಾಗೆ ಹೇಳಿದರು.
ಯಾವುದೇ ಕ್ಷೇತ್ರಗಳಿಗೆ ಅವರು ಭೇಟಿ ಕೊಟ್ಟಿಲ್ಲ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಈ ಹಿಂದೆ ಜೊಲ್ಲೆ ಅವರನ್ನು ನಾವೇ ಗೆಲ್ಲಿಸಿದ್ದೇವೆ. ನಮ್ಮನ್ನು ಅವರು ಮಾತನಾಡಿಸುತ್ತಿಲ್ಲ, ಇದರಿಂದ ಇನ್ನೂ ಚುನಾವಣೆಗೆ ತುಂಬಾ ಸಮಯವಿದೆ. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಸಾಧಿಸುತ್ತಾರೆ ಎಂದು ಕಾಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು.