ಬೆಳಗಾವಿ: ಚಾಲಕನ ಸಮೇತ ಕಾರೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಫೈರೋಜ್ ಬಡಗಾಂವಿ (38) ಕಾರಿನೊಳಗೆ ಸಂಪೂರ್ಣ ಸುಟ್ಟು ಹೋಗಿರುವ ಚಾಲಕ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಹೆಚ್ಚುವರಿ ಎಸ್ಪಿ ಶೃತಿ ಎಸ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಕೂಡ ಭೇಟಿ ನೀಡಿ ಪರಿಶೀಲಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.
"ನಮ್ಮ ಭಾಗದಲ್ಲಿ ಕಳ್ಳತನ ಪ್ರಕರಣಗಳು ಸೇರಿ ದಿನದಿಂದ ದಿನಕ್ಕೆ ಕ್ರೈಮ್ ರೇಟ್ ಹೆಚ್ಚಾಗುತ್ತಿದೆ. ಏನು ಮಾಡುತ್ತಿದ್ದೀರಿ? ರಾಜ್ಯ ಹೆದ್ದಾರಿಯಲ್ಲಿಯೇ ಇಂತಹ ದುರ್ಘಟನೆ ಹೇಗೆ ಜರುಗಿತು?. ದಿನದಿಂದ ದಿನಕ್ಕೆ ಪ್ರತಿ ತಾಲೂಕಿನಲ್ಲಿ ಮನೆ ಕಳ್ಳತನ ನಡೆಯುತ್ತಿದೆ. ಕಾರು ಅಪಘಾತದ ಬಗ್ಗೆ ಅನುಮಾನ ಇದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ, ಬೇಕಾದರೆ ನಾನು ಸಿಎಂ ಜತೆ ಮಾತನಾಡುತ್ತೇನೆ" ಎಂದು ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್ ಹಾಗೂ ಪಿಎಸ್ಐ ಬಸವರಾಜ ನೆರ್ಲಿ ಅವರನ್ನು ಪ್ರಕಾಶ ಹುಕ್ಕೇರಿ ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ತೀವ್ರ ಅಸಮಾಧಾನ ಕೂಡ ವ್ಯಕ್ತಪಡಿಸಿದರು.
ಮಂಗಳವಾರ ರಾತ್ರಿ ಚಿಕ್ಕೋಡಿಯಲ್ಲಿ ಚಾಲಕ ಸಹಿತ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದರಿಂದ ಚಾಲಕನ ಗುರುತು ಪತ್ತೆಯಾಗಿರಲಿಲ್ಲ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಆಗಮಿಸಿ ಪರಶೀಲನೆ ನಡೆಸಿದಾಗ ಚಿಕ್ಕೋಡಿ ಪಟ್ಟಣದ ನಿವಾಸಿ ಫೈರೋಜ್ ಬಡಗಾಂವಿ (38) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ತಾಯಿ, ಎರಡು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ, ಕೊಲೆ ಶಂಕೆ - Chikkodi Mother And Children Death