ಬೆಂಗಳೂರು: ಕುಮಾರಸ್ವಾಮಿ ಸೈನಿಕರನ್ನು ಕರೆತಂದು ಫೀಲ್ಡಿಗಿಳಿಯಬೇಕಿತ್ತು. ಸುಮ್ಮನೆ ಹೋಗಿ ಒಂದು ವಿಸಿಟ್ ಮಾಡುವುದಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಂಕೋಲ ಭೇಟಿ ವಿಚಾರವಾಗಿ ಮಾತನಾಡಿದ ಅವರು, ನಾವು ಒಂದೇ ಘಂಟೆಯಲ್ಲಿ ನಮ್ಮ ಮಿನಿಸ್ಟರ್‌ನ ಸ್ಥಳಕ್ಕೆ ಕಳಿಸಿದ್ದೆವು. ಕ್ಯಾಬಿನೆಟ್‌ನಿಂದಲೇ ಕಳುಹಿಸಿಕೊಡಲಾಗಿತ್ತು. ಸಚಿವ ಕೃಷ್ಣ ಬೈರೇಗೌಡ, ಮಂಕಾಳ ವೈದ್ಯ ಕೆಲಸ ಮಾಡ್ತಿದ್ದಾರೆ. ಹೆಚ್‌ಡಿಕೆ ಮಿಲಿಟರಿ ತಂದು ಕಾರ್ಯಾಚರಣೆ ಮಾಡಿಸಿದ್ರಾ?. ಹೆಚ್‌ಡಿಕೆ ಬರಲಿ, ಬೇಡ ಅಂದವರು ಯಾರು?. ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಅವರು ಹೋಗುವುದಕ್ಕೆ ನಾವ್ಯಾಕೆ ಅಡ್ಡಿ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಮುಂದುವರೆದು ಮಾತನಾಡುತ್ತ, ನಾಡಿನಾದ್ಯಂತ ಚೆನ್ನಾಗಿ ಮಳೆ ಬೀಳುತ್ತಿದೆ. ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಲಕ್ಷಣ ಕಾಣುತ್ತಿದೆ. ಮುಂಜಾಗ್ರತೆಯಾಗಿ ಕಾವೇರಿ ನದಿ ಪಾತ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ನಿಷೇಧಿಸಲಾಗಿದೆ. ಕಾರವಾರದಲ್ಲಿ ಮಳೆ ಅನಾಹುತ ಹಿನ್ನೆಲೆ ಕಾರ್ಯಾಚರಣೆಗೆ ಸ್ವಲ್ಪ ತೊಂದರೆ ಆಗ್ತಿದೆ. ಡ್ರೈವರ್ ಲಾರಿಯಲ್ಲೇ ಸಿಕ್ಕಿಕೊಂಡಿದ್ದಾನೆ. ಸಚಿವ ಮಂಕಾಳ ವೈದ್ಯ, ಶಾಸಕರು ಅಲ್ಲಿಗೆ ಹೋಗಿದ್ದಾರೆ ಎಂದು ತಿಳಿಸಿದರು.
ನಿಗಮಗಳ 2,250 ಕೋಟಿ ರೂ. ಹಣ ಹಿಂಪಡೆದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಿಗಮಗಳಲ್ಲಿ ಅಧಿಕಾರಿಗಳು ಖದೀಮರಿದ್ದಾರೆ. ಕೆಲ ಎಂಡಿಗಳು, ಅಧಿಕಾರಿಗಳು ಖದೀಮರಿದ್ದಾರೆ. ಅದಕ್ಕೆ ಖಜಾನೆಯಿಂದಲೇ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.