ಬೆಂಗಳೂರು: ನನ್ನ ಜನ್ಮದಿನವಾದ ಮೇ 15ರಂದು ಚುನಾವಣಾ ಪ್ರಚಾರ, ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಉತ್ತರ ಭಾರತ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಅಂದು ನಾನು ಯಾರಿಗೂ ಸಿಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
"ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು, ಬಂಧುಗಳು ಅಂದು ನನ್ನನ್ನು ಭೇಟಿ ಮಾಡಲು ಪ್ರಯತ್ನಿಸುವುದು ಬೇಡ. ದಯವಿಟ್ಟು ಯಾರೂ ತಪ್ಪು ತಿಳಿಯಬಾರದು. ತಾವು ಇದ್ದಲ್ಲಿಂದಲೇ ನನ್ನನ್ನು ಆಶೀರ್ವದಿಸಿ, ಹಾರೈಸಿ" ಎಂದು ಮನವಿ ಮಾಡಿದ್ದಾರೆ.
"ರಾಜ್ಯದಲ್ಲಿ ಬರಗಾಲವಿದೆ. ಮಳೆ, ಬೆಳೆ ಇಲ್ಲದೆ ಜನರು ಬವಣೆ ಪಡುತ್ತಿದ್ದಾರೆ. ಹೀಗಾಗಿ ಯಾರೂ ಕೂಡಾ ನನ್ನ ಜನ್ಮದಿನವನ್ನು ಆಚರಿಸಬಾರದು. ಯಾವುದೇ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬಾರದು. ಕಟೌಟ್, ಪೋಸ್ಟರ್ಸ್ ಹಾಕುವುದಾಗಲಿ, ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದಾಗಲಿ ಮಾಡಬಾರದು. ನಿಮ್ಮ ಪ್ರೀತಿಯಷ್ಟೇ ನನಗೆ ಸಾಕು. ಅದುವೇ ನನಗೆ ಶ್ರೀರಕ್ಷೆ" ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬರಿಲ್ಲ: ಅಮ್ಮಂದಿರ ದಿನವಾದ ಇಂದು ಡಿಕೆಶಿ ಎಕ್ಸ್ನಲ್ಲಿ ತಾಯಿ ಆಶೀರ್ವದಿಸುವ ಪೋಸ್ಟ್ವೊಂದನ್ನು ಹಾಕಿ, ಶುಭಾಶಯ ಕೋರಿದ್ದಾರೆ. 'ನನ್ನ ಅಮ್ಮನ ಆಶೀರ್ವಾದವೇ ನನ್ನ ಶಕ್ತಿಯ ಮೂಲ. ನನ್ನ ಅಮ್ಮ ಜನರ ಸೇವೆ ಮಾಡಲು ಮತ್ತು ಅವರ ಹಕ್ಕುಗಳಿಗಾಗಿ ಹೋರಾಡಲು ನನ್ನನ್ನು ಹುರುದುಂಬಿಸುತ್ತಾರೆ. ತಮ್ಮ ಮಕ್ಕಳ ಬದುಕನ್ನು ರೂಪಿಸಲು ತಮ್ಮ ಕನಸುಗಳನ್ನು ತ್ಯಾಗ ಮಾಡುವ ಎಲ್ಲಾ ತಾಯಂದಿರಿಗೆ ತಾಯಂದಿರ ದಿನದ ಶುಭಾಶಯಗಳು. ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬರಿಲ್ಲ' ಎಂದು ಬರೆದಿದ್ದಾರೆ.
ಇದನ್ನೂ ಓದಿ: ತಾಯಿಗಿಂತ ದೇವರಿಲ್ಲ: ಅಗಲಿದ ತಾಯಿಗೆ ಗುಡಿ ಕಟ್ಟಿಸಿ ನಿತ್ಯ ಪೂಜಿಸುವ ಮಕ್ಕಳು - Temple For Mother