ಬೆಂಗಳೂರು: "ರಾಜಕೀಯದಲ್ಲಿ ನನಗೆ ಯಾರೂ ವೈರಿಗಳಲ್ಲ. ಎಲ್ಲರೂ ನನ್ನ ಸ್ನೇಹಿತರೇ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ನಿಮ್ಮ ಹಾಗೂ ಪರಮೇಶ್ವರ್ ಅವರ ನಡುವೆ ಭಿನ್ನಾಭಿಪ್ರಾಯಗಳಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, "ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯವಿಲ್ಲ. ರಾಜಕೀಯದಲ್ಲಿ ನನಗೆ ಯಾರೂ ವೈರಿಗಳಲ್ಲ. ಎಲ್ಲರೂ ನನ್ನ ಸ್ನೇಹಿತರೇ. ಪಕ್ಷದಲ್ಲಿ ನಾವು ಜತೆಗೂಡಿ ಕೆಲಸ ಮಾಡಿದ್ದು, ಮುಂದೆಯೂ ಜತೆಯಲ್ಲೇ ಸಾಗುತ್ತೇವೆ. ಜತೆಗೂಡಿ ಯಶಸ್ಸು ಕಾಣುತ್ತೇವೆ" ಎಂದರು.
ಅಧಿಕಾರ ಹಂಚಿಕೆ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಿ.ಪರಮೇಶ್ವರ್ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸುತ್ತಾ, "ನಾನು ನಿಮ್ಮ ಮುಂದೆ ಏನೂ ಮಾತನಾಡಿಲ್ಲ. ಪರಮೇಶ್ವರ್ ಹಾಗೂ ಇತರರ ಜೊತೆಯೂ ಮಾತನಾಡಿಲ್ಲ. ನಾನು ವಾಹಿನಿಯೊಂದರಲ್ಲಿ ನನ್ನದೇ ಆದ ವಿಚಾರ ಪ್ರಸ್ತಾಪ ಮಾಡಿದ್ದೆ. ನಾವು ಏನು ಮಾತನಾಡಿಕೊಂಡಿದ್ದೇವೆ ಎಂದು ನಿಮ್ಮ ಮುಂದೆ ಹೇಳಲು ಸಾಧ್ಯವೇ? ಈ ವಿಚಾರವಾಗಿ ಮುಖ್ಯಮಂತ್ರಿಗಳು ನಿನ್ನೆ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದ್ದು, ನಾನು ಚರ್ಚೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದೇನೆ. ಮುಖ್ಯಮಂತ್ರಿಗಳ ಮಾತನ್ನು ನಾನು ಒಪ್ಪುತ್ತೇನೆ. ಸದ್ಯಕ್ಕೆ ಅಧಿಕಾರ ಹಸ್ತಾಂತರದ ಪ್ರಸ್ತಾಪವಿಲ್ಲ. ಯಾವುದೇ ಸಮಸ್ಯೆ ಇಲ್ಲದೇ ನಮ್ಮ ಸರಕಾರದ ಅಧಿಕಾರ ಅವಧಿ ಪೂರ್ಣಗೊಳಿಸುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಬಲಪ್ರದರ್ಶನದ ಅಗತ್ಯ ಇಲ್ಲ: "ನಮಗೆ ಬಲ ಪ್ರದರ್ಶನದ ಅಗತ್ಯವಿಲ್ಲ. ನಮ್ಮ ಪಕ್ಷದ ಆಚಾರ ವಿಚಾರಗಳನ್ನು ಜನರಿಗೆ ತಿಳಿಸಲು ಕಾರ್ಯಕ್ರಮ ಮಾಡಿದರೆ ಬಿಜೆಪಿ ಮತ್ತು ಜೆಡಿಎಸ್ನವರಿಗೆ ಹೊಟ್ಟೆಯುರಿ ಏಕೆ. ನಮ್ಮ ಪಕ್ಷ ಹಾಗೂ ಅನೇಕ ಸ್ವಾಭಿಮಾನಿ ಸಂಘಟನೆಗಳು ಸೇರಿ ಮಾಡುತ್ತಿರುವ ಕಾರ್ಯಕ್ರಮ. ಮುಂದೆ ಬೇರೆ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ಅನೇಕ ಸಂಘಟನೆಗಳು ಮುಂದೆ ಬಂದಿವೆ. ಹಾಸನದಲ್ಲಿ ನಮ್ಮ ತಾಯಂದಿರು ಕಣ್ಣೀರು ಹಾಕಿದಾಗ ಅವರ ಕಣ್ಣೀರನ್ನು ಯಾರೂ ಒರೆಸುವ ಪ್ರಯತ್ನ ಮಾಡಲಿಲ್ಲ. ಚನ್ನಪಟ್ಟಣಕ್ಕೆ ಬಂದು ಕಣ್ಣೀರು ಹಾಕಿದರು. ಬಿಜೆಪಿ ಹಾಗೂ ಜೆಡಿಎಸ್ ತಮ್ಮ ನೆಲೆ ಕಳೆದುಕೊಳ್ಳುತ್ತಿದ್ದು, ಸಂಕಟದಿಂದ ನಮ್ಮ ಕಾರ್ಯಕ್ರಮವನ್ನು ಟೀಕಿಸುತ್ತಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಒಪ್ಪಂದ ಆಗಿದ್ದರೆ ಅವರಿಬ್ಬರೇ ರಾಜಕಾರಣ ನಡೆಸಲಿ, ನಾವೆಲ್ಲ ಯಾಕಿರಬೇಕು?: ಸಚಿವ ಜಿ.ಪರಮೇಶ್ವರ್