ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ರಾಜೀನಾಮೆ ಪ್ರಶ್ನೆಯೇ ಇಲ್ಲ. ಬಿಜೆಪಿ ಸೇರಿ ವಿರೋಧ ಪಕ್ಷಗಳು ಅವರ ಮೇಲೆ ಷಡ್ಯಂತ್ರ ಮಾಡುತ್ತಿವೆ. ನಮ್ಮ ಪಕ್ಷ ಸಿಎಂ ಪರವಾಗಿ ನಿಲ್ಲಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಹೈಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಈಗ ಕಾರ್ಯಕ್ರಮದಿಂದ ಬರುತ್ತಿದ್ದೇನೆ. ಈಗ ನೀವು ವಿಚಾರ ತಿಳಿಸಿದ್ದೀರಿ. ನಾನು ಆದೇಶ ನೋಡಿಲ್ಲ. ನೀವು ಒಬ್ಬೊಬ್ಬರು ಒಂದು ರೀತಿ ಹೇಳೋದನ್ನು ಕೇಳುವುದಕ್ಕೆ ತಯಾರಿಲ್ಲ. ನಮಗೂ ಜವಾಬ್ದಾರಿಗಳಿವೆ. ನಮ್ಮ ಮುಖ್ಯಮಂತ್ರಿಗಳ ಮೇಲೆ ದೊಡ್ಡ ಷಡ್ಯಂತ್ರ ನಡೆದಿದೆ. ನನ್ನ ಮೇಲೆ ಹೇಗೆ ಷಡ್ಯಂತ್ರ ಮಾಡಿ ಕೇಸ್ ಹಾಕಿ ಭಗವಂತನ ಕೃಪೆಯಿಂದ ನಾನು ಹೊರಗಡೆ ಬಂದಿದ್ದೇನೆ. ಆ ಕೇಸ್ ಕೂಡ ವಜಾ ಆಗಿದೆ. ಹಾಗೆಯೇ ಇಂದು ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಮೇಲೆ ದೂರು ಕೊಟ್ಟಿದ್ದಾರೆ ಎಂದರು.
ಅವರು ಪ್ರಕರಣದಲ್ಲಿ ಕ್ಲೀನಾಗಿ ಹೊರ ಬರುತ್ತಾರೆ. ಯಾವುದೇ ತನಿಖೆಗೆ ಆದೇಶ ಮಾಡಲಿ, ಏನೇ ಮಾಡಲಿ. ಅವರದ್ದು ಏನೂ ತಪ್ಪಿಲ್ಲ. ನನ್ನ ಪ್ರಕಾರ ಅವರದ್ದು ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿಗಳಾಗಿ ಅವರಿಗೆ ಬದ್ಧತೆಯಿದೆ. ಆ ಬದ್ಧತೆ ಜೊತೆಗೆ ನಾವು ಇದ್ದೇವೆ. ಅವರು ರಾಜ್ಯಕ್ಕೆ ಕೊಟ್ಟಿರುವ ಕಾರ್ಯಕ್ರಮವನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ವಿರುದ್ಧ ಡಿಸಿಎಂ ದೂರಿದರು.
ಪ್ರಕರಣದಲ್ಲಿ ಸಿಎಂಗೆ ಏನು ಹಿನ್ನಡೆ ಇದೆ ಅಂತಾ ನಾನು ಮೊದಲು ಹೈಕೋರ್ಟ್ ಆದೇಶ ನೋಡಿ ಹೇಳುತ್ತೇನೆ. ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ. ಸಿಎಂ ಯಾವುದೇ ತಪ್ಪು ಮಾಡಿಲ್ಲ ಎಂದು ಡಿಕೆಶಿ ಸಮರ್ಥಿಸಿಕೊಂಡರು.
ವಿಕಾಸಸೌಧದಲ್ಲಿ ಸಚಿವ ಕೃಷ್ಣಬೈರೇಗೌಡ ಹೇಳಿಕೆ: ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ, ಸುಪ್ರೀಂ ಕೋರ್ಟ್ನಲ್ಲೂ ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯಪಾಲರು ರಾಜಕೀಯವಾಗಿ ತೆಗೆದುಕೊಂಡ ನಿರ್ಧಾರ. ಇದು ರಾಜಕೀಯ ಪ್ರೇರಿತ ಅನ್ನುವ ಹೇಳಿಕೆಗೆ ಈಗಲೂ ಬದ್ಧ. ಕಾನೂನು ಮತ್ತು ರಾಜಕೀಯ ಹೋರಾಟ ಮುಂದುವರಿಸುತ್ತೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸಿಎಂ ಜೊತೆಗೆ ನಾವು ಇರುತ್ತೇವೆ: ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿದ್ದರೂ ತನಿಖೆಗೆ ಅಡ್ಡಿ ಆಗಲ್ಲ, ಅರ್ಜಿದಾರರು ಇರುತ್ತಾರಲ್ಲ. ತನಿಖೆ ತಪ್ಪು ದಾರಿಯಲ್ಲಿ ಹೊರಟರೆ ಅರ್ಜಿದಾರರು ಪ್ರಶ್ನಿಸಬಹುದು. ಸಿಎಂ ಜೊತೆಗೆ ನಾವು ಇರುತ್ತೇವೆ ಎಂದು ಶಾಸಕಾಂಗ ಸಭೆಯಲ್ಲಿ ಹೇಳುತ್ತೇವೆ. ರಾಜ್ಯಪಾಲರ ನಡೆ ಪಕ್ಷಪಾತಿ ಆಗಿದೆ. ರಾಜ್ಯದಲ್ಲಿ ಈ ಹಿಂದೆ ಇದ್ದ ಯಾವ ರಾಜ್ಯಪಾಲರು ಈ ಧೋರಣೆ ಅನುಸರಿಸಿರಲಿಲ್ಲ ಎಂದು ಆರೋಪಿಸಿದರು.
ಈಗಾಗಲೇ ತೀರ್ಪು ಬಂದಿದೆ. ಸಿಎಂ ವಿರುದ್ಧ ತನಿಖೆ ಮುಂದುವರಿಸುವಂತೆ ನ್ಯಾಯಾಲಯ ಆದೇಶಿಸಿದೆ. ರಾಜ್ಯಪಾಲರು ತನಿಖೆಗೆ ನೀಡಿದ್ದ ಆದೇಶ ಮುಂದುವರಿಸುವಂತೆ ಕೋರ್ಟ್ ಆದೇಶ ಬಂದಿದೆ. ತನಿಖೆ ಮುಂದುವರಿಯಲು ಯಾರದ್ದೂ ತಕರಾರು ಇಲ್ಲ. ಎಲ್ಲರೂ ಅದನ್ನೆ ಬಯಸುತ್ತಾರೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ತನಿಖೆ ಆಗಿ, ಸಾಬೀತಾಗಬೇಕು. ಅದು ಎರಡನೇ ಹಂತ. ತನಿಖೆ ಆದ ತಕ್ಷಣ ಸಿಎಂ ಎಲ್ಲದಕ್ಕೂ ಜವಾಬ್ದಾರಿ ಆಗುವುದಿಲ್ಲ. ಅದು ಯಾವ ರೀತಿ ತನಿಖೆ ಆಗುತ್ತೆ? ಎಷ್ಟು ದಿನ ಆಗುತ್ತೆ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ ಎಂದರು.
ಧಾರವಾಡದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಪ್ರಾಸಿಕ್ಯೂಷನ್ ಅಂತಾ ಅಲ್ಲ, ತನಿಖೆ ಮಾಡಲು ಅಡ್ಡಿ ಇಲ್ಲ ಎಂಬ ರೀತಿ ಆಗಿರಬಹುದು. ಮೂಲವಾದ ತನಿಖೆಯೇ ಆಗಿಲ್ಲ. ತನಿಖೆ ಆಗದೇ ಪ್ರಾಸಿಕ್ಯೂಷನ್ ಪ್ರಶ್ನೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್, ನಾವೆಲ್ಲರೂ ಸಿಎಂ ಪರವಾಗಿ ನಿಲ್ಲುವುದಾಗಿ ಹೇಳಿದರು.